ಕ್ರೀಡೆ

ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು: ಸಚಿನ್ ತೆಂಡೂಲ್ಕರ್

Pinterest LinkedIn Tumblr


ಹೊಸದಿಲ್ಲಿ: ಕೆಲವು ದಿನಗಳ ಹಿಂದೆಯಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ಎರಡು ಹೊಸ ಚೆಂಡುಗಳ ಬಳಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್‌ನ ಮಾಜಿ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಇದೀಗ ಕ್ರಿಕೆಟ್ ಒಳಿತಿಗಾಗಿ ಚೆಂಡು ಮತ್ತು ಬ್ಯಾಟ್ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಲಹೆ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಎರಡು ಬದಿಗಳಿಂತಲೂ ಎರಡು ಹೊಸ ಚೆಂಡು ಬಳಕೆ ಮಾಡುವುದರಿಂದ ರಿವರ್ಸ್ ಸ್ವಿಂಗ್ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಬ್ಯಾಟ್ಸ್‌ಮನ್ ಸ್ನೇಹಿ ನಿರ್ಧಾರದ ವಿರುದ್ಧ ಸಚಿನ್ ಪ್ರತಿಕ್ರಿಯೆ ನೀಡಿದ್ದಾರೆ.

“ಬೌಲರ್‌ಗಳಿಗೆ ಸ್ವಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಪಂದ್ಯ ಆರಂಭದಲ್ಲಾಗಲಿ ಅಥವಾ ಇನ್ನಿಂಗ್ಸ್ ಕೊನೆಯಲ್ಲೂ ಚೆಂಡು ತಿರುವನ್ನು ಪಡೆಯುವುದಿಲ್ಲ. ಹಿಂದೆಲ್ಲ ಬೌಲರ್‌ಗಳು ರಿವರ್ಸ್ ಸ್ವಿಂಗ್ ಮೇಲೆ ಅವಲಂಬಿತವಾಗಿದ್ದರು. ರಿವರ್ಸ್ ಸ್ವಿಂಗ್ ಕ್ರಿಕೆಟ್‌ನ ಅವಿಭಾಜ್ಯ ಅಂಗ. ಆದರೆ ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ” ಎಂದು ಅಭಿಪ್ರಾಯಪಟ್ಟರು.

ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಬ್ಯಾಟಿಂಗ್ ದಿಗ್ಗಜ ತಾವು ಎರಡು ಹೊಸ ಚೆಂಡಿನಲ್ಲಿ ಹೆಚ್ಚು ಆಡಿಲ್ಲ ಎಂಬುದನ್ನು ಉಲ್ಲೇಖಿಸಿದರು. ವಾಸ್ತವವಾಗಿ ಹೊಸ ಕ್ಷೇತ್ರರಕ್ಷಣೆ ನಿಯಮದಡಿಯಲ್ಲೂ ಆಡಿಲ್ಲ ಎಂಬುದನ್ನು ಹೇಳಿದರು.

“ನಿಮಯದಲ್ಲಿ ತುರ್ತು ಬದಲಾವಣೆಯಾಗುವ ನಿರೀಕ್ಷೆಯಿಲ್ಲ. ಈ ನಿಟ್ಟಿನಲ್ಲಿ ಅನೇಕ ಘಟ್ಟಗಳನ್ನು ಪರೀಶೀಲಿಸಬೇಕಾಗುತ್ತದೆ. ಆದರೆ ಎರಡು ಹೊಸ ಚೆಂಡಿನ ಬಳಕೆಯಿಂದ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ಎಷ್ಟು ಪ್ರಯೋಜನವನ್ನು ಪಡೆದಿದ್ದಾರೆ ಎಂಬುದನ್ನು ತುಲನೆ ಮಾಡಬಹುದಾಗಿದೆ. ಎರಡು ಹೊಸ ಚೆಂಡು ಹಾಗೂ ಒಂದು ಚೆಂಡಿನ ಬಳಕೆ ಬಗ್ಗೆ ತುಲನೆ ಮಾಡಬೇಕು. ಕ್ಷೇತ್ರ ನಿರ್ಬಂಧದೊಂದಿಗೆ ಚೆಂಡಿನಿಂದ ತಿರುವು ದೊರಕದಿರುವುದು ಬೌಲರ್‌ಗಳಿಗೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ” ಎಂದರು.

ತಮ್ಮ ಆಡುವ ಕಾಲಘಟ್ಟದಲ್ಲಿ ನಿಮಯಗಳ ಬಗ್ಗೆ ಯಾಕೆ ಪ್ರತಿಕ್ರಿಯಿಸಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಸಚಿನ್, ಹೇಗೆ ಪ್ರತಿಕ್ರಿಯಿಸಲು ಸಾಧ್ಯ? ಎಂಬುದನ್ನು ಕೇಳಿದರು. ಏಕದಿನ ಹಾಗೂ ಟೆಸ್ಟ್‌ನಲ್ಲಿ ಅನೇಕ ಬದಲಾವಣೆಗಳನ್ನು ನೋಡಿದ್ದೇನೆ. ಆದರೆ ಎಲ್ಲರಿಗೂ ಒಂದೇ ತರಹನೇ ನಿಯಮ ಹೇರಲಾಗುತ್ತದೆ. ನೀವು ಆಡುತ್ತಿರುವಾಗ ನಿಸ್ಸಂಶಯವಾಗಿಯೂ ಪ್ರತಿಕ್ರಿಯಿಸುವುದಿಲ್ಲ ಎಂದರು.

ಬ್ಯಾಟಿಂಗ್ ಸ್ನೇಹಿ ಪಿಚ್ ನಿರ್ಮಾಣದಿಂದಲೂ ಬೌಲರ್‌ಗಳಿಗೆ ಪಿಚ್‌ನಿಂದ ಯಾವುದೇ ನೆರವು ದೊರಕುತ್ತಿಲ್ಲ. ಹಾಗೆಯೇ ಸ್ಪಿನ್ನರ್‌ಗಳು ಕಠಿಣ ಸವಾಲು ಎದುರಾಗುತ್ತಿದೆ ಎಂಬುದನ್ನು ಹೇಳಿದರು.

ಟ್ವೆಂಟಿ-20 ಕ್ರಿಕೆಟ್‌ ಬ್ಯಾಟಿಂಗ್ ಸ್ನೇಹಿ ಆಗಿರುತ್ತದೆ. ಇದೀಗ ಏಕದಿನದಲ್ಲೂ 320 ರನ್ ಕೂಡಾ ಸುರಕ್ಷಿತವಲ್ಲ. ಹಾಗಾಗಿ ಕ್ರಿಕೆಟ್‌ನ ಒಳಿತಿಗಾಗಿ ಚೆಂಡು ಹಾಗೂ ಬ್ಯಾಟ್ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕಿದೆ ಎಂದರು.

Comments are closed.