ಕ್ರೀಡೆ

ಆಫ್ಘಾನ್ ವಿರುದ್ಧದ ಟೆಸ್ಟಿನಲ್ಲಿ ದಾಖಲೆಯ ಶತಕ ಸಿಡಿಸಿದ ಶಿಖರ್ ಧವನ್

Pinterest LinkedIn Tumblr

ಬೆಂಗಳೂರು: ಸಿಲಿಕಾನ್ ಸಿಟಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಮೇಲುಗೈ ಸಾಧಿಸಿದ್ದು, ಶಿಖರ್ ಧವನ್ ದಾಖಲೆಯ ಶತಕ ಸಿಡಿಸಿ ಔಟ್ ಆಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆರಂಭಿಕ ಆಟಗಾರರಾದ ಮುರಳಿ ವಿಜಯ್ ಮತ್ತು ಶಿಖರ್ ಧವನ್ ಸ್ಫೋಟಕ ಆರಂಭ ನೀಡಿದ್ದಾರೆ. ಈ ಪೈಕಿ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿದ್ದು,ಕೇವಲ 96 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳ ಮೂಲಕ 107 ರನ್ ಸಿಡಿಸಿ ಔಟ್ ಆಗಿದ್ದಾರೆ. ಆರಂಭದಿಂದಲೂ ಆಫ್ಘಾನಿಸ್ತಾನ ಬೌಲರ್ ಗಳ ಬೆವರಿಳಿಸಿದ ಧವನ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಭರ್ಜರಿ ಶತಕ ಸಿಡಿಸಿದರು.

ಅಂತೆಯೇ ಈ ಶತಕದ ಮೂಲಕ ಧವನ್ ದಾಖಲೆಯೊಂದನ್ನು ಬರೆದಿದ್ದು, ಟೆಸ್ಟ್ ಪಂದ್ಯವೊಂದರಲ್ಲಿ ಊಟದ ವಿರಾಮಕ್ಕೂ ಮುನ್ನವೇ ಶತಕ ಗಳಿಸಿದ ಭಾರತದ ಮೊದಲ ಆಟಗಾರನೆಂಬ ದಾಖಲೆ ಬರೆದರು. ಶಿಖರ್ 87 ಎಸೆತಗಳಲ್ಲಿ 100 ರನ್ ಗಳಿಸಿದರು. ಅದರಲ್ಲಿ 18 ಬೌಂಡರಿ, 3 ಸಿಕ್ಸರ್ ಇದ್ದವು. ಬಳಿಕ ತಮ್ಮ ಖಾತೆಗೆ 7 ರನ್ ಸೇರಿಸಿದ ಧವನ್ ಆಫ್ಘನ್ ಬೌಲರ್ ಯಮಿನ್ ಅಹ್ಮದ್ಜಾಯಿ ಬೌಲಿಂಗ್ ನಲ್ಲಿ ಔಟ್ ಆದರು.

ಪ್ರಸ್ತುತ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದ್ದು, 53 ರನ್ ಗಳಿಸಿರುವ ಮುರಳಿ ವಿಜಯ್ ಹಾಗೂ 1 ರನ್ ಗಳಿಸಿರುವ ಲೋಕೇಶ್ ರಾಹುಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

Comments are closed.