ಕ್ರೀಡೆ

ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಂಡ ಚೆನ್ನೈ

Pinterest LinkedIn Tumblr

ಪುಣೆ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸತತ ಗೆಲುವಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಈ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ಎಂಟು ವಿಕೆಟ್‌ಗಳಿಂದ ಗೆದ್ದಿತು. ಈ ಮೂಲಕ ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ಹಂತದಲ್ಲಿ ಸ್ಥಾನ ಭದ್ರಪಡಿಸಿಕೊಂಡಿತು.

ಶಿಖರ್ ಧವನ್ (79; 49 ಎ, 3 ಸಿ, 10 ಬೌಂ) ಅವರ ಭರ್ಜರಿ ಬ್ಯಾಟಿಂಗ್ ಮೂಲಕ ಸನ್‌ರೈಸರ್ಸ್‌ 179 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ತಂಡ ಒಂದು ಓವರ್ ಬಾಕಿ ಇರುವಾಗಲೇ ಜಯ ಗಳಿಸಿತು.

ಐಪಿಎಲ್‌ನಲ್ಲಿ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿರುವ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸನ್‌ರೈಸರ್ಸ್‌ಗೆ ಚೆನ್ನೈ ತಂಡದ ಆರಂಭಿಕ ಜೋಡಿ ಶೇನ್ ವಾಟ್ಸನ್ (57; 35 ಎ, 3 ಸಿ, 5 ಬೌಂ) ಮತ್ತು ಅಂಬಟಿ ರಾಯುಡು ದಿಟ್ಟ ಉತ್ತರ ನೀಡಿದರು.

ಮೊದಲ ವಿಕೆಟ್‌ಗೆ ಇವರಿಬ್ಬರು 134 ರನ್ ಸೇರಿಸಿ ಕೇನ್ ವಿಲಿಯಮ್ಸನ್‌ ಬಳಗಕ್ಕೆ ನಿರಾಸೆ ಮೂಡಿಸಿದರು. ವಾಟ್ಸನ್ ರನ್‌ ಔಟ್‌ ಆಗಿ ಮರಳಿದರು. ಸುರೇಶ್‌ ರೈನಾ ಕೇವಲ ಎರಡು ರನ್ ಗಳಿಸಿ ಮರಳಿದರು. ಆದರೆ ರಾಯುಡು ಜೊತೆಗೂಡಿದ ನಾಯಕ ಮಹೇಂದ್ರ ಸಿಂಗ್ ದೋನಿ 14 ಎಸೆತಗಳಲ್ಲಿ 20 ರನ್‌ ಗಳಿಸಿ ತಂಡಕ್ಕೆ ಜಯ ಗಳಿಸಿಕೊಟ್ಟರು.

ಅಂಬಟಿ ಮೋಹಕ ಶತಕ: ಶಕೀಬ್ ಅಲ್‌ ಹಸನ್ ಹಾಕಿದ ಮೊದಲ ಓವರ್‌ನಲ್ಲೇ ಬೌಂಡರಿ ಗಳಿಸುವ ಮೂಲಕ ಸ್ಫೋಟಕ ಬ್ಯಾಟಿಂಗ್‌ಗೆ ನಾಂದಿ ಹಾಡಿದ ಅಂಬಟಿ ರಾಯುಡು ಎರಡನೇ ಓವರ್‌ನಲ್ಲಿ ಸಿದ್ಧಾರ್ಥ್ ಕೌಲ್ ಅವರನ್ನು ಎರಡು ಬಾರಿ ಬೌಂಡರಿಗೆ ಮತ್ತು ಒಮ್ಮೆ ಸಿಕ್ಸರ್‌ಗೆ ಎತ್ತಿದರು.

ಕೌಲ್‌ ಹಾಕಿದ 11ನೇ ಓವರ್‌ನಲ್ಲೂ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದರು. ರಶೀದ್ ಖಾನ್ ಮತ್ತು ಭುವನೇಶ್ವರ್ ಕುಮಾರ್ ಅವರ ದಾಳಿಯನ್ನು ಕೂಡ ದಿಟ್ಟವಾಗಿ ಎದುರಿಸಿ ರನ್ ಮಳೆ ಸುರಿಸಿದರು. ಅವರಿಗೆ ಶೇನ್ ವಾಟ್ಸನ್‌ ಉತ್ತಮ ಬೆಂಬಲ ನೀಡಿದರು. ವಾಟ್ಸನ್ ಔಟಾದ ನಂತರವೂ ಬ್ಯಾಟಿಂಗ್ ವೈಭವ ಮುಂದುವರಿಸಿ 19ನೇ ಓವರ್‌ನ ಐದನೇ ಎಸೆತದಲ್ಲಿ ಒಂಟಿ ರನ್ ಗಳಿಸಿ ಶತಕ ಪೂರೈಸಿದರು.

ಶಿಖರ್ ಧವನ್‌ – ವಿಲಿಯಮ್ಸನ್‌ ಉತ್ತಮ ಬ್ಯಾಟಿಂಗ್‌: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ತಂಡದ ಮೊದಲ ವಿಕೆಟ್ 18 ರನ್‌ಗಳಿಗೆ ಉರುಳಿತು. ಅದರೆ ಶಿಖರ್ ಧವನ್‌ ಮತ್ತು ನಾಯಕ ಕೇನ್ ವಿಲಿಯಮ್ಸನ್‌ (51; 39 ಎ, 2 ಸಿ, 5 ಬೌಂ) ಎರಡನೇ ವಿಕೆಟ್‌ಗೆ 123 ರನ್ ಸೇರಿಸಿದರು. ಇವರಿಬ್ಬರು ಔಟಾದ ನಂತರ ದೀಪಕ್ ಹೂಡ ಉತ್ತಮ ಬ್ಯಾಟಿಂಗ್ ಮಾಡಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.

Comments are closed.