ಕ್ರೀಡೆ

ಗುಡುಗಿದ ಇಶಾನ್ ಕಿಶನ್‌ ! ಮುಂಬೈ ಬೌಲರ್’ಗಳ ದಾಳಿಗೆ ಕೋಲ್ಕತ್ತಾ ಧೂಳಿಪಟ; 102 ರನ್‌ ಅಂತರದ ಬೃಹತ್ ಗೆಲುವು ಸಾಧಿಸಿದ ರೋಹಿತ್ ಬಳಗ

Pinterest LinkedIn Tumblr

ಕೋಲ್ಕೊತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಇಲ್ಲಿನ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಮುಂಬಯಿ ಇಂಡಿಯನ್ಸ್ 102 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ.

211 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ 18.1 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟಾಯಿತು. ಈ ಗೆಲುವಿನೊಂದಿಗೆ ಮುಂಬೈ ತಂಡ ಕೋಲ್ಕತ್ತ ಎದುರಿನ 22 ಪಂದ್ಯಗಳಲ್ಲಿ 18 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತು.

ಇಶಾನ್ ಕಿಶನ್‌ ಸ್ಫೋಟಕ ಅರ್ಧಶತಕ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ (62; 21 ಎ, 6 ಸಿ, 5 ಬೌಂ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ ಕಲೆ ಹಾಕಿತು.

ತಂಡದ ಪರ ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೂಯಿಸ್‌ ಮೊದಲ ವಿಕೆಟ್‌ಗೆ 46 ರನ್ ಸೇರಿಸಿದರು. ಲೂಯಿಸ್ ಔಟಾದ ನಂತರ ಸೂರ್ಯಕುಮಾರ್‌ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ ಎರಡನೇ ವಿಕೆಟ್‌ಗೆ 16 ರನ್ ಜೋಡಿಸಿದರು. ಅಷ್ಟರಲ್ಲಿ ಯಾದವ್ ಔಟಾದರು. ಈ ಎರಡೂ ವಿಕೆಟ್‌ಗಳು ಲೆಗ್ ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಅವರ ಪಾಲಾದವು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಕಿಶನ್‌ ಬೌಲರ್‌ಗಳನ್ನು ಕಾಡಿದರು. ಎದುರಿಸಿದ ಎರಡನೇ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದರು. ನಂತರದ ಓವರ್‌ನಲ್ಲಿ ಪೀಯೂಷ್ ಚಾವ್ಲಾ ಅವರನ್ನು ಮೂರು ಬಾರಿ ಬೌಂಡರಿ ಗೆರೆಯಾಚೆ ಅಟ್ಟಿದರು. ವೇಗದ ಬೌಲರ್‌ಗಳನ್ನು ಕೂಡ ಅವರು ದಿಟ್ಟವಾಗಿ ಎದುರಿಸಿದರು.

ಆ್ಯಂಡ್ರೆ ರಸೆಲ್‌ ಹಾಕಿದ 12ನೇ ಓವರ್‌ನಲ್ಲಿ ಮೋಹಕ ಬೌಂಡರಿ ಗಳಿಸಿದರು. ಪ್ರಸಿದ್ಧ ಕೃಷ್ಣ ಅವರ ನಂತರದ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿದರು. ಕುಲದೀಪ್ ಯಾದವ್‌ ಹಾಕಿದ 14ನೇ ಓವರ್‌ನ ಕೊನೆಯ ನಾಲ್ಕು ಎಸೆತಗಳನ್ನು ಗ್ಯಾಲರಿಗೆ ಕಳುಹಿಸಿದರು. ಮುಂದಿನ ಓವರ್‌ನಲ್ಲಿ ಸುನಿಲ್ ನಾರಾಯಣ್‌ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಹೆಚ್ಚು ಪರಿಣಾಮ ಬೀರಲಿಲ್ಲ. ಆದರೆ ಒಂಬತ್ತು ಎಸೆತಗಳಲ್ಲಿ 24 ರನ್ ಗಳಿಸಿದ ಬೆನ್ ಕಟ್ಟಿಂಗ್‌ ಮೊತ್ತವನ್ನು 200ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 6ಕ್ಕೆ 210 (ಸೂರ್ಯಕುಮಾರ್ ಯಾದವ್‌ 36, ಎವಿನ್‌ ಲೂಯಿಸ್‌ 18, ರೋಹಿತ್ ಶರ್ಮಾ 36, ಇಶಾನ್ ಕಿಶನ್‌ 62, ಹಾರ್ದಿಕ್ ಪಾಂಡ್ಯ 19, ಬೆನ್‌ ಕಟ್ಟಿಂಗ್‌ 24, ಕೃಣಾಲ್ ಪಾಂಡ್ಯ ಔಟಾಗದೆ 8; ಪ್ರಸಿದ್ಧ ಕೃಷ್ಣ 41ಕ್ಕೆ1, ಟಾಮ್ ಕುರನ್‌ 33ಕ್ಕೆ1, ಸುನಿಲ್‌ ನಾರಾಯಣ್‌ 27ಕ್ಕೆ1, ಪೀಯೂಷ್ ಚಾವ್ಲಾ 48ಕ್ಕೆ3)

ಕೋಲ್ಕತ್ತ ನೈಟ್ ರೈಡರ್ಸ್‌: 18.1 ಓವರ್‌ಗಳಲ್ಲಿ 108ಕ್ಕೆ ಆಲೌಟ್‌ (ಕ್ರಿಸ್‌ ಲಿನ್‌ 21, ರಾಬಿನ್ ಉತ್ತಪ್ಪ 14, ನಿತೀಶ್ ರಾಣಾ 21, ಟಾಮ್ ಕುರನ್‌ 12, ಪೀಯೂಷ್ ಚಾವ್ಲಾ 11; ಮೆಕ್‌ಲೆಂಘಾನ್‌ 24ಕ್ಕೆ1, ಹಾರ್ದಿಕ್ ಪಾಂಡ್ಯ 12ಕ್ಕೆ2, ಜಸ್‌ಪ್ರೀತ್ ಬೂಮ್ರಾ 17ಕ್ಕೆ1, ಮಯಂಕ್ ಮಾರ್ಕಂಡೆ 26ಕ್ಕೆ1, ಬೆನ್ ಕಟ್ಟಿಂಗ್‌ 12ಕ್ಕೆ1). ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 102 ರನ್‌ಗಳ ಜಯ.

Comments are closed.