ಪುಣೆ: ಆರಂಭಿಕ ಆಟಗಾರ ಶೇನ್ ವಾಟ್ಸನ್ (78; 40ಎ, 4ಬೌಂ, 7ಸಿ) ಮತ್ತು ನಾಯಕ ಮಹೇಂದ್ರ ಸಿಂಗ್ ದೋನಿ (ಔಟಾಗದೆ 51; 22ಎ, 2ಬೌಂ, 5ಸಿ) ಅವರು ಸೋಮವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ರನ್ ಹೊಳೆ ಹರಿಸಿದರು.
ಇವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ಉತ್ತಮ ಮೊತ್ತ ಕಲೆ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಎದುರು ಗೆದ್ದಿತು.
ದೋನಿ ಬಳಗ ಗಳಿಸಿದ 211ರನ್‌ಗಳಿಗೆ ಉತ್ತರಿಸಿದ ಡೇರ್ ಡೆವಿಲ್ಸ್ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ರಿಷಭ್ ಪಂಥ್ (79; 45 ಎ, 4 ಸಿ, 7 ಬೌಂ) ಮತ್ತು ವಿಜಯ್ ಶಂಕರ್ (ಔಟಾಗದೆ 54; 31ಎ, 5 ಸಿ, 1 ಬೌಂ) ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಹೀಗಾಗಿ ಕೊನೆಯ ಓವರ್ ವರೆಗೂ ಪಂದ್ಯ ಕುತೂಹಲ ಉಳಿಸಿಕೊಂಡಿತು.
10 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ (ಪೃಥ್ವಿ ಶಾ) ಕಳೆದುಕೊಂಡ ಡೆಲ್ಲಿ ತಂಡಕ್ಕೆ ಕಾಲಿನ್ ಮನ್ರೊ ಮತ್ತು ನಾಯಕ ಶ್ರೇಯಸ್ ಅಯ್ಯರ್ ಆಸರೆಯಾದರು. ಆದರೆ ಮನ್ರೊ ವಿಕೆಟ್ ಪಡೆದ ಆಸಿಫ್ ಪಂದ್ಯಕ್ಕೆ ತಿರುವು ನೀಡಿದರು. ಅಯ್ಯರ್ ರನ್ ಔಟ್ ಆಗುವುದರೊಂದಿಗೆ ತಂಡದ ಸಂಕಷ್ಟ ಹೆಚ್ಚಿತು.
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಜಡೇಜಾ ಬೌಲ್ಡ್ ಮಾಡಿದರು. 74 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ತಂಡಕ್ಕೆ ರಿಷಭ್ ಪಂಥ್ ಮತ್ತು ವಿಜಯ್ ಶಂಕರ್ ಜೀವ ತುಂಬಿದರು. ಐದನೇ ವಿಕೆಟ್‌ಗೆ ಇವರಿಬ್ಬರು 88 ರನ್ ಸೇರಿಸಿ ಭರವಸೆ ಮೂಡಿಸಿದರು. ಆದರೆ ನಿರ್ಣಾಯಕ ಘಟ್ಟದಲ್ಲಿ ಪಂಥ್ ಔಟಾದ ಕಾರಣ ತಂಡದ ಕನಸು ಕಮರಿತು.
ಶತಕದ ಜೊತೆಯಾಟ: ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡಕ್ಕೆ ಆಸ್ಟ್ರೇಲಿಯಾದ ಆಲ್‌ರೌಂಡರ್ ವಾಟ್ಸನ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿ (33; 33ಎ, 3ಬೌಂ, 1ಸಿ) ಸ್ಫೋಟಕ ಆರಂಭ ನೀಡಿದರು.
ಈ ಜೋಡಿ ಮೊದಲ ವಿಕೆಟ್‌ಗೆ 65 ಎಸೆತಗಳಲ್ಲಿ 102 ರನ್ ಕಲೆಹಾಕಿತು. ಡು ಪ್ಲೆಸಿ ಮತ್ತು ಸುರೇಶ್ ರೈನಾ ಔಟಾದ ನಂತರ ಅಂಬಟಿ ರಾಯುಡು (41; 24ಎ, 5ಬೌಂ, 1ಸಿ) ಮತ್ತು ದೋನಿ ಅಬ್ಬರಿಸಿದರು. ಇವರು ನಾಲ್ಕನೇ ವಿಕೆಟ್‌ಗೆ 79 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 211 (ಶೇನ್ ವಾಟ್ಸನ್ 78, ಫಾಫ್ ಡು ಪ್ಲೆಸಿ 33, ಅಂಬಟಿ ರಾಯುಡು 41, ಮಹೇಂದ್ರ ಸಿಂಗ್ ದೋನಿ ಔಟಾಗದೆ 51; ಅಮಿತ್ ಮಿಶ್ರಾ 30ಕ್ಕೆ1, ವಿಜಯ್ ಶಂಕರ್ 22ಕ್ಕೆ1, ಗ್ಲೆನ್ ಮ್ಯಾಕ್ಸ್‌ವೆಲ್ 5ಕ್ಕೆ1)
ಡೆಲ್ಲಿ ಡೇರ್ ಡೆವಿಲ್ಸ್: (ಕಾಲಿನ್ ಮನ್ರೊ 26, ರಿಷಭ್ ಪಂಥ್ 79, ವಿಜಯ್ ಶಂಕರ್ 54; ಕೆ.ಎಂ. ಆಸಿಫ್ 43ಕ್ಕೆ2).
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 13 ರನ್‌ಗಳ ಜಯ.
Comments are closed.