ಕ್ರೀಡೆ

ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಗೆ 7 ವಿಕೆಟ್ ಗಳ ಭರ್ಜರಿ ಜಯ

Pinterest LinkedIn Tumblr

ಜೈಪುರ: ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ನೀಡಿದ 161 ರನ್ ಗಳ ಗುರಿಯನ್ನು ಕೋಲ್ಕತಾ ತಂಡ ಕೇವಲ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಪ್ರಮುಖವಾಗಿ ಕೋಲ್ಕತಾ ಕೇವಲ 1 ರನ್ ಗೆ ಆರಂಭಿಕ ಆಟಗಾರ ಕ್ರಿಸ್ ಲಿನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಎದುರಿಸಿತಾದರೂ ಮತ್ತೋರ್ವ ಆರಂಭಿಕ ಆಟಗಾರ ಸುನಿಲ್ ನರೇನ್ ಅವರ ಸಮಯೋಚಿತ ಆಟದಿಂದ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿತು. ಬಳಿಕ 35 ರನ್ ಗಳಿಸಿದ್ದ ನರೇನ್ ರನೌಟ್ ಆಗುತ್ತಿದ್ದಂತೆಯೇ ಮತ್ತೆ ಕೋಲ್ಕತಾ ಪಾಳಯದಲ್ಲಿ ಆತಂಕ ಎದುರಾಯಿತು.

ಆದರೆ ಈ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ರಾಬಿನ್ ಉತ್ತಪ್ಪ ಭರ್ಜರಿ ಆಟವಾಡಿದರು. 6 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 48 ರನ್ ಗಳಿಸಿದ್ದ ಉತ್ತಪ್ಪ ಕೇವಲ 2 ರನ್ ಗಳ ಅಂತರದಲ್ಲಿ ತಮ್ಮ ಅರ್ಧಶತಕ ಮಿಸ್ ಮಾಡಿಕೊಂಡರು. ಬಳಿಕ ಜೊತೆ ಗೂಡಿದ ನಿತೀಶ್ ರಾಣಾ (ಅಜೇಯ 35 ರನ್ ) ಮತ್ತು ನಾಯಕ ದಿನೇಶ್ ಕಾರ್ತಿಕ್ (ಅಜೇಯ 42 ರನ್ ) ಉತ್ತಮ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇನ್ನು ರಾಜಸ್ಥಾನದ ಪರ ಕೆ ಗೌತಮ್ 2 ವಿಕೆಟ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ನಾಯಕ ಅಜಿಂಕ್ಯಾ ರಹಾನೆ ಮತ್ತು ಆರ್ಕಿ ಶಾರ್ಟ್ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವಿಫಲತೆಯಿಂದಾಗಿ ರಾಜಸ್ಥಾನ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಯಿತು.

Comments are closed.