ಕ್ರೀಡೆ

ಕನ್ನಡಿಗರ ಅಬ್ಬರ ! ರಾಹುಲ್-ನಾಯರ್ ಸ್ಪೋಟಕ ಬ್ಯಾಟಿಂಗ್; ಡೆಲ್ಲಿ ವಿರುದ್ಧ ಪಂಜಾಬಿಗೆ ಜಯ

Pinterest LinkedIn Tumblr

ಮೊಹಾಲಿ: ಕನ್ನಡಿಗ ಕೆ.ಎಲ್ ರಾಹುಲ್ ದಾಖಲೆಯ ಅರ್ಧಶತಕ ಹಾಗೂ ಕರುಣ್ ನಾಯರ್ ಸಮಯೋಚಿತ ಅರ್ಧಶತಕದ ನೆರವಿನಿಂದ ಡೆಲ್ಲಿ ಡೇರ್’ಡೆವಿಲ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 06 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ.

ಡೆಲ್ಲಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಅಕ್ಷರಶಃ ಸಿಡಿಲಬ್ಬರದ ಆರಂಭ ಪಡೆಯಿತು. ಮೊದಲ ಮೂರು ಓವರ್ ಮುಕ್ತಾಯವಾಗುವಷ್ಟರಲ್ಲೇ ಪಂಜಾಬ್ 52 ರನ್ ಕಲೆಹಾಕಿತು. ಇದರಲ್ಲಿ ರಾಹುಲ್ ಬಾರಿಸಿದ್ದು ಬರೋಬ್ಬರಿ 51 ರನ್. ಕೇವಲ 14 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್’ಗಳ ನೆರವಿನೊಂದಿಗೆ ರಾಹುಲ್ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿವೇಗವಾಗಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ದಾಖಲೆಯನ್ನು ರಾಹುಲ್ ನಿರ್ಮಿಸಿದರು. ಈ ಮೊದಲು ಸುನಿಲ್ ನರೈನ್ ಹಾಗೂ ಯೂಸೂಪ್ ಪಠಾಣ್ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ಪಂಜಾಬ್ ತಂಡದ ಮೊತ್ತ 58 ರನ್’ಗಳಿದ್ದಾಗ ಮಯಾಂಕ್ ಅಗರ್’ವಾಲ್(7) ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ರಾಹುಲ್(51) ಕೂಡಾ ಪೆವಿಲಿಯನ್ ಸೇರಿದರು. ಈ ವೇಳೆ ಜತೆಯಾದ ಯುವರಾಜ್ ಸಿಂಗ್ ಹಾಗೂ ಮತ್ತೋರ್ವ ಕನ್ನಡಿಗ ಕರುಣ್ ನಾಯರ್ ಎಚ್ಚರಿಕೆಯಾಗಿ ತಂಡವನ್ನು ಮುನ್ನಡೆಸಿದರು. ಯುವಿ (12) ರಾಹುಲ್ ತೆವಾಟಿಯಾಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 50 ರನ್ ಬಾರಿಸಿ ಕ್ರಿಸ್ಟಿನ್’ಗೆ ವಿಕೆಟ್ ಒಪ್ಪಿಸಿದರು. ಆ ವೇಳೆಗಾಗಲೇ ಪಂಜಾಬ್ ಗೆಲುವಿನ ದಡ ಸಮೀಪಿಸಿತ್ತು. ಅಂತಿಮವಾಗಿ ಮಿಲ್ಲರ್() ಹಾಗೂ ಸ್ಟೋನಿಸ್ ಜೋಡಿ ಪಂಜಾಬ್ ಪಡೆಯನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ನಾಯಕ ಗೌತಮ್ ಗಂಭೀರ್ ಆಕರ್ಷಕ ಅರ್ಧಶತಕದ ನೆರವಿನಿಂದ 166 ರನ್ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್:

KXIP: 167/4

ರಾಹುಲ್: 51

DD : 166/7

ಗಂಭೀರ್: 55

Comments are closed.