ಕ್ರೀಡೆ

ತಮ್ಮ ಇಡೀ ಸಂಸದ ವೇತನವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿ ಮಾದರಿಯಾದ ಸಚಿನ್ ತೆಂಡೂಲ್ಕರ್

Pinterest LinkedIn Tumblr

ನವದೆಹಲಿ: ಇತ್ತೀಚೆಗೆ ರಾಜ್ಯಸಭಾ ಸದಸ್ಯತ್ವದ ಅವಧಿ ಪೂರೈಸಿರುವ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರು, ಸಂಸತ್‌ ಸದಸ್ಯರಾಗಿದ್ದ ವೇಳೆ ಪಡೆದಿರುವ ಸಂಬಳ ಹಾಗೂ ಭತ್ಯೆಯ ಎಲ್ಲ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಕಳೆದ 6 ವರ್ಷಗಳಿಂದ ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಸಚಿನ್‌ ಭತ್ಯೆ ಸೇರಿದಂತೆ ಸುಮಾರು ₹ 90 ಲಕ್ಷ ವೇತನ ಪಡೆದಿದ್ದಾರೆ.

ಪ್ರಧಾನಮಂತ್ರಿ ಕಚೇರಿಯೂ ಈ ಬಗ್ಗೆ ಅಂಗೀಕಾರ ಪತ್ರವೊಂದನ್ನು ಹೊರಡಿಸಿದ್ದು, ‘ಈ ಚಿಂತನಾಶೀಲ ನಡೆಯನ್ನು ಪ್ರಧಾನಮಂತ್ರಿಗಳು ಒಪ್ಪಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ಕೊಡುಗೆಯು ತೊಂದರೆಗೊಳಗಾಗುವವರಿಗೆ ನೆರವಾಗಲು ಅಪಾರವಾದ ಸಹಾಯ ನೀಡುತ್ತದೆ’ ಎಂದು ತಿಳಿಸಿದೆ.

ರಾಜ್ಯಸಭೆಗೆ ಆಯ್ಕೆಯಾಗಿದ್ದ ಸಚಿನ್‌ ಹಾಗೂ ಚಿತ್ರನಟಿ ರೇಖಾ ಅವರ ವಿರುದ್ಧ ಸಂಸತ್ತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಆದಾಗ್ಯೂ, ಸಚಿನ್ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯನ್ನು ಸಮರ್ಥವಾಗಿ ಬಳಕೆ ಮಾಡಿದ್ದಾರೆ.

ಸಚಿನ್‌ ಅವರ ಕಚೇರಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ‘ದೇಶದಾದ್ಯಂತ ಸುಮಾರು 185 ಯೋಜನೆಗಳನ್ನು ಮಂಜೂರು ಮಾಡಲಾಗಿದ್ದು, ₹30 ಕೋಟಿ ಹಣ ಹಂಚಿಕೆ ಮಾಡಲಾಗಿದೆ. ಜತೆಗೆ ಶಾಲಾ ಕಟ್ಟಡಗಳ ನವೀಕರಣ ಸೇರಿದಂತೆ ಶಿಕ್ಷಣ ಸಂಬಂಧಿತ ರಚನಾತ್ಮಕ ಅಭಿವೃದ್ಧಿಗೆ ₹ 7.4 ಕೋಟಿ ವೆಚ್ಚ ಮಾಡಲಾಗಿದೆ’

ಅದಲ್ಲದೆ ಸಂಸದರ ಆದರ್ಶ ಗ್ರಾಮ ಯೋಜನೆ ಕಾರ್ಯಕ್ರಮದಡಿಯಲ್ಲಿ ಆಂಧ್ರ ಪ್ರದೇಶದ ಪುಟ್ಟಮ್‌ರಾಜು ಕಂದ್ರಿಗ ಹಾಗೂ ಮಹಾರಾಷ್ಟ್ರದ ಡೊಂಜಾ ಗ್ರಮಗಳನ್ನು ದತ್ತು ಪಡೆದಿದ್ದರು.

Comments are closed.