ಕ್ರೀಡೆ

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಸಿಸ್ ನಾಯಕ ಸ್ಮಿತ್- ಉಪನಾಯಕ ವಾರ್ನರ್ ಗೆ ಶಿಕ್ಷೆ ಆಗಿತೇ…?

Pinterest LinkedIn Tumblr

ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ 12 ತಿಂಗಳ ನಿಷೇದ ಶಿಕ್ಷೆ ನೀಡುವ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮಾಜಿ ನಾಯಕನ ವಿರುದ್ಧ ಕೆಂಡಾಮಂಡಲವಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ಮಿತ್ ಗೆ ಆಜೀವ ನಿಷೇಧ ಹೇರಲು ಮುಂದಾಗಿತ್ತಾದರೂ, ಹಿರಿಯ ಮಾಜಿ ಕ್ರಿಕೆಟಿಗರ ಸಲಹೆ ಮೇರೆಗೆ ಸ್ಮಿತ್ ಗೆ ಒಂದು ವರ್ಷ ನಿಷೇಧ ಹೇರಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೆ ಉಪನಾಯಕ ಡೇವಿಡ್ ವಾರ್ನರ್ ಗೂ ಇದೇ ಶಿಕ್ಷೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ನಿರ್ಧರಿಸಿದ್ದು, ಸಿಎ ಸೌಹಾರ್ದ ಘಟಕದ ಮುಖ್ಯಸ್ಥ ಇಯಾನ್ ರಾಯ್‌ ಮತ್ತು ಹೈ ಪರ್ಫಾರ್ಮೆನ್ಸ್‌ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಅವರು ಸೋಮವಾರ ಕೇಪ್‌ಟೌನ್‌ ತಲುಪಿದ್ದು, ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಆಟಗಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಂತೆಯೇ ಅಧಿಕಾರಿಗಳು ನಾಲ್ಕನೇ ಟೆಸ್ಟ್‌ಗಾಗಿ ತಂಡ ಜೊಹಾನ್ಸ್‌ಬರ್ಗ್‌ಗೆ ತೆರಳುವ ಮುನ್ನ ಮಾಹಿತಿ ಕಲೆ ಹಾಕಲಿದ್ದು, ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾಗೆ ತಮ್ಮ ವರದಿ ನೀಡಿದ್ದಾರೆ ಎನ್ನಲಾಗಿದೆ.

ಈ ವರದಿಯನ್ನಾಧರಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಆಸಿಸ್ ನಾಯಕ ಸ್ಮಿತ್ ಹಾಗೂ ಉಪ ನಾಯಕ ವಾರ್ನರ್ ಗೆ 12 ತಿಂಗಳ ಕ್ರಿಕೆಟ್ ನಿಷೇಧ ಹೇರಲು ಮುಂದಾಗಿದೆ ಎನ್ನಲಾಗಿದೆ.

Comments are closed.