ಕ್ರೀಡೆ

ಬಾಲ್‌ ಟ್ಯಾಂಪರಿಂಗ್‌: ಆಸೀಸ್‌ ನಾಯಕ ಸ್ಥಾನ ತ್ಯಜಿಸಿದ ಸ್ಮಿತ್‌

Pinterest LinkedIn Tumblr


ಕೇಪ್‌ ಟೌನ್‌:ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3 ನೇ ಟೆಸ್ಟ್‌ ಪಂದ್ಯದಲ್ಲಿ ಬಾಲ್‌ ಟ್ಯಾಂಪರಿಂಗ್‌ ಮಾಡಿದ ಆರೋಪ ಎದುರಿಸುತ್ತಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಸ್ಮಿತ್‌ ಜೊತಗೆ ಉಪನಾಯಕ ಡೇವಿಡ್‌ ವಾರ್ನರ್‌ ಅವರೂ ಉಪನಾಯಕ ಸ್ಥಾನವನ್ನು ತ್ಯಜಿಸಿದ್ದಾರೆ.

ಭಾನುವಾರ ನಡೆಯುತ್ತಿದ್ದ ಟೆಸ್ಟ್‌ಪಂದ್ಯದ 3 ನೇ ದಿನ ಆಸೀಸ್‌ ತಂಡದ ಆರಂಭಿಕ ಆಟಗಾರ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ್ದು ಕ್ಯಾಮಾರದಲ್ಲಿ ಸೆರೆಯಾಗಿ ಭಾರಿ ಸುದ್ದಿಯಾಗಿತ್ತು. ಈ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ತನಿಖೆಗೆ ಆದೇಶಿಸಿತ್ತು, ತನಿಖೆ ಮುಗಿಯುವ ವರೆಗೂ ಸ್ಮಿತ್‌ಗೆ ಸ್ಥಾನದಲ್ಲಿ ಮುಂದುವರಿಯಬಹುದು ಎಂದಿತ್ತು. ಆಸ್ಟ್ರೇಲಿಯಾ ಸರ್ಕಾರವೂ ಸ್ಮಿತ್‌ ತಪ್ಪಿದ್ದರೆ ನಾಯಕ ಸ್ಥಾನದಿಂದ ತೆಗೆದು ಹಾಕಲು ಸೂಚನೆ ನೀಡಿತ್ತು.

ತನ್ನ ವಿರುದ್ಧದ ಟೀಕೆಗಳ ಮಧ್ಯೆ ಸ್ಮಿತ್ ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಸದ್ಯ ವಿಕೆಟ್‌ ಕೀಪರ್‌ ಆಗಿರುವ ಟಿಮ್‌ ಪೇಯ್ನ್‌ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ.

ಬ್ಯಾನ್‌ಕ್ರಾಫ್ಟ್ ಅವರು ಟೇಪ್‌ ಬಳಸಿ ಚಂಡನ್ನು ವಿರೂಪಗೊಳಿಸಲು ಯತ್ನಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದ್ದು ಪಂದ್ಯದ ಸಂಭಾವನೆಯ 100 ಶೇಕಡಾ ದಂಡ ವಿಧಿಸಿ , ಒಂದು ಪಂದ್ಯಕ್ಕೆ ನಿಷೇಧ ಹೇರುವ ಸಾಧ್ಯತೆಗಳಿವೆ.

-ಉದಯವಾಣಿ

Comments are closed.