ಕ್ರೀಡೆ

ಬಿಸಿಸಿಐ ಹೊಸ ವೇತನ ಪಟ್ಟಿ : ಕೊಹ್ಲಿ, ರೋಹಿತ್‌ಗೆ 7 ಕೋಟಿ

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿರುವ ನೂತನ, ಪರಿಷ್ಕೃತ ವೇತನ ಪಟ್ಟಿ ಪ್ರಕಾರ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ವರ್ಷಕ್ಕೆ 7 ಕೋಟಿ ರೂ. ಪಗಾರ ಪಡೆಯಲಿದ್ದಾರೆ.

ಆಶ್ಚರ್ಯವೆಂದರೆ ಯಶಸ್ವೀ ಯುವ ಎಸೆಗಾರ ಜಸ್‌ಪ್ರೀತ್‌ ಬುಮ್ರಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗಿಂತಲೂ ಹೆಚ್ಚು ಪಗಾರ ಪಡೆಯಲಿದ್ದಾರೆ.

ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ನೇಮಿಸಿರುವ ಆಡಳಿತ ಸಮಿತಿಯು ಅಕ್ಟೋಬರ್‌ 2017ರಿಂದ ಸೆಪ್ಟಂಬರ್‌ 2018ರ ವರೆಗಿನ ಒಂದು ವರ್ಷ ಅವಧಿಗೆ ಕ್ರಿಕೆಟಿಗರ ವಾರ್ಷಿಗ ಗುತ್ತಿಗೆಯ ಹೊಸ ಪಟ್ಟಿ ಪ್ರಕಟಿಸಿದ್ದಾರೆ.

ವಿಶೇಷವೆಂದರೆ ಈ ಹೊಸ ಪಟ್ಟಿಯಲ್ಲಿ ಹಿರಿಯ ಇಂಡಿಯಾ ಕ್ರಿಕೆಟಿಗರಿಗೆ ಗ್ರೇಡ್‌ ಎ+ ಎಂಬ ಹೊಸ ವರ್ಗವನ್ನು ರೂಪಿಸಲಾಗಿದ್ದು ಅನಂತರದಲ್ಲಿ ಗ್ರೇಡ್‌ ಎ, ಬಿ ಮತ್ತು ಸಿ ಇವೆ.

ಟಾಪ್‌ ಕೆಟಗರಿಗೆ ಒಳಪಡುವವರು ವರ್ಷಕ್ಕೆ 7 ಕೋಟಿ ರೂ. ಗುತ್ತಿಗೆಗೆ ಅರ್ಹರಾಗಿದ್ದಾರೆ. ಎ ಗ್ರೇಡ್‌ ಆಟಗಾರರಿಗೆ ವರ್ಷಕ್ಕೆ 5 ಕೋಟಿ, ಗ್ರೇಡ್‌ ಬಿ ಮತ್ತು ಸಿ ಗೆ ಅನುಕ್ರಮವಾಗಿ 3 ಮತ್ತು 1 ಕೋಟಿ ರೂ. ಸಿಗಲಿದೆ.

ನಾಯಕ ವಿರಾಟ್‌ ಕೊಹ್ಲಿ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ಅವರಿಗೆ ಟಾಪ್‌ ಗ್ರೇಡ್‌ ಎ+ ಗುತ್ತಿಗೆ ಸಿಕ್ಕಿದೆ.

ಮಹಿಳಾ ಕ್ರಿಕೆಟಿಗರಿಗೂ ದೊಡ್ಡ ಮೊತ್ತದ ಗುತ್ತಿಗೆ ನೀಡಲಾಗಿದೆ. ಇವರಲ್ಲಿ ಸಿ ಕೆಟಗರಿಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಎ ಗ್ರೇಡ್‌ಗೆ ಒಳಪಡುವವರು ವರ್ಷಕ್ಕೆ 50 ಲಕ್ಷ, ಬಿ ಗ್ರೇಡ್‌ನ‌ವರು 30 ಲಕ್ಷ ಮತ್ತು ಸಿ ಗ್ರೇಡ್‌ಗೆ ಒಳಪಡುವ ಉಳಿದವರು 10 ಲಕ್ಷ ರೂ. ಪಡೆಯಲಿದ್ದಾರೆ.

ದೇಶೀಯ ಶುಲ್ಕ ಸಂರಚನಯಲ್ಲೂ ಶೇ.200ರಷ್ಟು ಹೆಚ್ಚಳ ಮಾಡಲಾಗಿದೆ. ದೇಶೀಯ ದಿನವಹಿ ಶುಲ್ಕವನ್ನು ಆಡುವ 11ರ ತಂಡದೊಳಗೆ ಇರುವವರಿಗೆ 35,000 ರೂ.ಗಳಿಗೆ ಏರಿಸಲಾಗಿದೆ. ಮೀಸಲು ಆಟಗಾರರಿಗೆ 17,500 ರೂ. ಸಿಗಲಿದೆ.

ಹಿರಿಯರ ಮಟ್ಟ ಮಾತ್ರವಲ್ಲದೆ ವಯೋ ಸಮೂಹದಲ್ಲೂ ದೊಡ್ಡ ಮೊತ್ತದ ಲಾಭವನ್ನು ಕಲ್ಪಿಸಲಾಗಿದೆ. ಅಂಡರ್‌ 23 ಆಟಗಾರರ ದಿನವಹಿ ಶುಲ್ಕ 17,500 ರೂ. ಇದೆ; ಮೀಸಲು ಆಟಗಾರರಿಗೆ 8,750 ರೂ. ಇದೆ.

ಅಂಡರ್‌ 19 ನಲ್ಲಿ 10,500 ರೂ., ಮೀಸಲಿಗರಿಗೆ 5,250 ರೂ., ಅಂಡರ್‌ 16 ನಲ್ಲಿ 3,500 ರೂ., ಮೀಸಲಿಗರಿಗೆ 1,750 ರೂ. ಇದೆ.

-ಉದಯವಾಣಿ

Comments are closed.