ಕ್ರೀಡೆ

ಕೋಲ್ಕತ ನೈಟ್​ರೈಡರ್ಸ್​ ನಾಯಕತ್ವ ದಿನೇಶ್ ಕಾರ್ತಿಕ್ ಹೆಗಲಿಗೆ, ಉತ್ತಪ್ಪ ಉಪನಾಯಕ

Pinterest LinkedIn Tumblr

ನವದೆಹಲಿ: ಭಾರತ ತಂಡದ ವಿಕೆಟ್ಕೀಪರ್​-ಬ್ಯಾಟ್ಸ್ ಮನ್ 32 ವರ್ಷದ ದಿನೇಶ್ ಕಾರ್ತಿಕ್ 11ನೇ ಆವೃತ್ತಿಯ ಐಪಿಎಲ್​ನಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಇನ್ನು ತಂಡದ ಅನುಭವಿ ಆಟಗಾರ ಕರ್ನಾಟಕದ ರಾಬಿನ್ ಉತ್ತಪ್ಪರನ್ನು ತಂಡದ ಉಪನಾಯಕರನ್ನಾಗಿ ನೇಮಿಸಿದೆ.

ಕೆಕೆಆರ್ ತಂಡ ಹರಾಜಿನ ವೇಳೆ ರಾಬಿನ್ ಉತ್ತಪ್ಪರನ್ನು 6.4 ಕೋಟಿ ರೂ. ಮೊತ್ತಕ್ಕೆ ಆರ್​ಟಿಎಂ ಮಾಡಿಕೊಂಡಿತ್ತು. ಐಪಿಎಲ್ ನೇರಪ್ರಸಾರ ವಾಹಿನಿ ಸ್ಟಾರ್​ಸ್ಪೋರ್ಟ್ಸ್​ನ ಕಾರ್ಯಕ್ರಮದ ವೇಳೆ ಕೆಕೆಆರ್ ಸಿಇಒ ಹಾಗೂ ಎಂಡಿ ವೆಂಕಿ ಮೈಸೂರು ಇದನ್ನು ಪ್ರಕಟಿಸಿದರು.

‘ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ಎನಿಸಿದೆ. ಐಪಿಎಲ್​ನಲ್ಲಿ ಕೆಲ ಯಶಸ್ವಿ ಫ್ರಾಂಚೈಸಿಗಳಲ್ಲಿ ಇದೂ ಒಂದು. ಹೊಸ ಸವಾಲಿಗೆ ನಾನು ಸಜ್ಜಾಗಿದ್ದೇನೆ. ಅನುಭವ ಹಾಗೂ ಯುವ ಆಟಗಾರರ ಸಮ್ಮಿಳಿತವಾಗಿರುವ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ’ ಎಂದು ಕಾರ್ತಿಕ್ ಹೇಳಿದ್ದಾರೆ.

ಕಳೆದ ವರ್ಷದ ಐಪಿಎಲ್​ನಲ್ಲಿ ಗುಜರಾತ್ ಲಯನ್ಸ್ ತಂಡದ ಪರ ಆಡಿದ್ದ ಕಾರ್ತಿಕ್ 361 ರನ್ ಬಾರಿಸಿದ್ದರು. 6ನೇ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಆ ಆವೃತ್ತಿಯಲ್ಲಿ 510 ರನ್​ಗಳೊಂದಿಗೆ ವಿಕೆಟ್ಕೀಪರ್ ಆಗಿ 14 ಬಲಿ ಪಡೆದಿದ್ದರು. ಐಪಿಎಲ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್​ಡೆವಿಲ್ಸ್ ಹಾಗೂ ಆರ್​ಸಿಬಿ ತಂಡದ ಪರ ಆಡಿದ ಅನುಭವಿಯಾಗಿದ್ದಾರೆ. ಏಪ್ರಿಲ್ 8 ರಂದು ಈಡನ್ ಗಾರ್ಡನ್ಸ್​ನಲ್ಲಿ ಕೆಕೆಆರ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ತಮಿಳುನಾಡು ತಂಡದ ನಾಯಕ: ದಿನೇಶ್ ಕಾರ್ತಿಕ್​ಗೆ ಐಪಿಎಲ್ ತಂಡದ ನಾಯಕತ್ವ ಹೊಸ ಜವಾಬ್ದಾರಿ. ಇದಕ್ಕೂ ಮುನ್ನ ದೇಶೀಯ ಕ್ರಿಕೆಟ್​ನಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸಿದ ಅನುಭವ ಮಾತ್ರ ಇವರಿಗಿದೆ. 2009-10ರಲ್ಲಿ ತಮಿಳುನಾಡು ತಂಡ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆದಾಗ ತಂಡದ ನಾಯಕರಾಗಿದ್ದರು. ಕಳೆದ ವರ್ಷ ಇಂಡಿಯಾ ರೆಡ್ ತಂಡದ ನಾಯಕತ್ವ ವಹಿಸಿಕೊಂಡು ದುಲೀಪ್ ಟ್ರೋಫಿ ಗೆಲುವಿಗೆ ಕಾರಣರಾಗಿದ್ದರು.

ಐಪಿಎಲ್ ನಾಯಕರು

ಆರ್​ಸಿಬಿ: ವಿರಾಟ್ ಕೊಹ್ಲಿ
ಸಿಎಸ್​ಕೆ: ಎಂಎಸ್ ಧೋನಿ
ಸನ್​ರೈಸರ್ಸ್: ಡೇವಿಡ್ ವಾರ್ನರ್
ಮುಂಬೈ: ರೋಹಿತ್ ಶರ್ಮ
ಪಂಜಾಬ್: ಆರ್. ಅಶ್ವಿನ್
ಡೆಲ್ಲಿ: ಗೌತಮ್ ಗಂಭೀರ್
ರಾಜಸ್ಥಾನ: ಸ್ಟೀವನ್ ಸ್ಮಿತ್
ಕೆಕೆಆರ್: ದಿನೇಶ್ ಕಾರ್ತಿಕ್

ಕಿಂಗ್ಸ್ ಇಲೆವೆನ್​ಗೆ ವೆಂಕಟೇಶ್ ಪ್ರಸಾದ್ ಬೌಲಿಂಗ್ ಕೋಚ್

ಭಾರತ ಜೂನಿಯರ್ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕರ್ನಾಟಕದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಸ್ವಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಿಕೊಳ್ಳುವ ಸಲುವಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಜ್ ಮೂರು ವರ್ಷಗಳ ಅವಧಿಗೆ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಪಂಜಾಬ್ ತಂಡದ ಮೆಂಟರ್ ಹಾಗೂ ಟೀಮ್ ಡೈರೆಕ್ಟರ್ ಆಗಿದ್ದಾರೆ.

Comments are closed.