ಕ್ರೀಡೆ

ಅಪ್ಪ ನಡೆದ ಹಾದಿಯಲ್ಲಿ ಸಾಗುತ್ತಿರುವ ಕ್ರಿಕೆಟ್​ ದಿಗ್ಗಜರ ಮಕ್ಕಳು

Pinterest LinkedIn Tumblr


ಹೊಸದಿಲ್ಲಿ: 1877 ರಿಂದ ಶುರುವಾದ ಕ್ರಿಕೆಟ್​ ಎಂಬ ಜಾದೂಲೋಕದಲ್ಲಿ ಇದುವರೆಗೂ ಎಷ್ಟೋ ಮಂದಿ ಬದುಕು ರೂಪಿಸಿಕೊಂಡಿದ್ದಾರೆ. ಹಲವರು ನಮ್ಮನ್ನು ರಂಜಿಸಿ ಮರೆಯಾಗಿದ್ದಾರೆ. ಕೆಲವರು ನಿವೃತ್ತಿಯಿಂದ ದೂರ ಸರಿದಿದ್ದಾರೆ. ಆದರೆ, ಕೆಲವು ಕ್ರಿಕೆಟ್​ ಕುಟುಂಬದ ಕುಡಿಗಳು ಅಪ್ಪ ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿರುವುದಲ್ಲದೇ ಮತ್ತೆ ಕ್ರಿಕೆಟ್​ ಪರಂಪರೆಯನ್ನು ನೆನಪು ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಕಠಿಣ ಪರಿಶ್ರಮ ಪಡುತ್ತಿರುವ ಕ್ರಿಕೆಟ್​ ದಿಗ್ಗಜರ ಕುಡಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಚಿನ್​ ಮತ್ತು ಅರ್ಜುನ್​
ಈ ಸಾಲಲ್ಲಿ ಮೊದಲಿಗೆ ನಿಲ್ಲುವುದು ಕ್ರಿಕೆಟ್​ ದೇವರೆಂದು ಖ್ಯಾತಿಯಾಗಿರುವ ಸಚಿನ್​ ತೆಂಡೂಲ್ಕರ್. 24 ವರ್ಷಗಳಿಂದ ಭಾರತವನ್ನು ಪ್ರತಿನಿಧಿಸಿದ ಇವರು ಮಾಡದ ದಾಖಲೆಗಳೇ ಇಲ್ಲ. ಇವರ ಹಾದಿಯಲ್ಲೇ ಸಾಗಿರುವ ಮಗ ಅರ್ಜುನ್ ತೆಂಡೂಲ್ಕರ್ ಅಪ್ಪನನ್ನೆ ಮೀರಿಸಲಿದ್ದಾರೆ. ಆಲ್​ರೌಂಡರ್​ ಆಗಿರುವ ಅರ್ಜುನ್​ ದೇಶಿ ಪಂದ್ಯಾವಳಿಯಲ್ಲಿ ಮಿಂಚುತ್ತಿದ್ದಾರೆ.

ರಾಹುಲ್​ ಮತ್ತು ಸಮಿತ್​
ಭಾರತದ ಮಾಜಿ ನಾಯಕ ಹಾಗೂ ವಾಲ್​ ಖ್ಯಾತಿಯ ರಾಹುಲ್​ ಡ್ರಾವಿಡ್ ಅವರ ಮಗ ಸಮಿತ್​ ಕೂಡ ಅಪ್ಪನಂತೆ ಉತ್ತಮ ಕ್ರಿಕೆಟಿಗನಾಗಲೂ ಪರಿಶ್ರಮ ಪಡುತ್ತಿದ್ದಾರೆ.​ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪರವಾಗಿ ಆಡುತ್ತಿರುವ ಸಮಿತ್​ 14 ವರ್ಷದೊಳಗಿನ ಟೂರ್ನಮೆಂಟ್​ಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ.

ಡರೇನ್​ ಲೆಹಮನ್​​ ಮತ್ತು ಜೇಕ್​
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ತಂಡದ ಕೋಚ್​ ಆಗಿರುವ ಡರೇನ್​ ಲೆಹಮನ್​​ ಅವರ 24 ವರ್ಷದ ಮಗ ಜೇಕ್​ ಕೂಡ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಲು ಸತತ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಹಲವು ದೇಶಿ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಕ್ರಿಕೆಟ್​ ದಿಗ್ಗಜರ ಗಮನ ಸೆಳೆದಿದ್ದಾರೆ.

ಮಖಾಯ ಎನ್ಟಿನಿ ಮತ್ತು ಥಂಢೊ ಎನ್ಟಿನಿ
ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಆಗಿ ಮಿಂಚಿದ ಮಖಾಯ ಎನ್ಟಿನಿ ರೀತಿಯಲ್ಲೇ ಅವರ ಮಗ ಥಂಢೊ ಎನ್ಟಿನಿ ಕೂಡ ವೇಗದ ಬೌಲರ್​ ಆಗಲು ಹೊರಟಿದ್ದು, ಅಪ್ಪನ ಮಾರ್ಗದರ್ಶನ ಪಡೆದಿದ್ದಾರೆ. ಅಲ್ಲದೆ, ಮುಂದಿನ ತಿಂಗಳು ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ 19 ವರ್ಷದೊಳಗಿನ ವಿಶ್ವಕಪ್​ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸ್ವೀವ್​ ವಾಗ್ ಮತ್ತು ಆಸ್ಟಿನ್​
ಆಸ್ಟ್ರೇಲಿಯಾದ ಸ್ಟಾರ್​ ಆಟಗಾರ ಸ್ವೀವ್​ ವಾಗ್ 90ರ ದಶಕದಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಹಲವು ಜಯವನ್ನು ತಂದುಕೊಟ್ಟಿದ್ದರು. ಅವರ ದಾರಿಯಲ್ಲೇ ಮಗ ಆಸ್ಟಿನ್​ ಸಾಗುತ್ತಿದ್ದು, ಆಲ್​ರೌಂಡರ್​ ಆಗಿರುವ ಆಸ್ಟಿನ್​ ಕೂಡ 19 ವರ್ಷದೊಳಗಿನ ವಿಶ್ವಕಪ್​ ಟೂರ್ನಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಚಂದ್ರಪಾಲ್​ ಮತ್ತು ಟ್ಯಾಗೆನರೀನ್
ಮೂಲ ಭಾರತೀಯನಾಗಿ ವೆಸ್ಟ್​ ಇಂಡೀಸ್​ ತಂಡವನ್ನು ಪ್ರತಿನಿಧಿಸುತ್ತಿದ್ದ ಶಿವನಾರಾಯಣ್​ ಚಂದ್ರಪಾಲ್​ ಇಂಡೀಸ್​ ಪಾಲಿಗೆ ಅದ್ಭುತ ಆಟಗಾರ. ನಾಯಕನಾಗಿ ಹಲವು ಗೆಲುವನ್ನು ತಂದುಕೊಟ್ಟಿದ್ದಾರೆ. ಇದೀಗ ಅವರ ಹೆಜ್ಜೆಯಲ್ಲಿ ಸಾಗುತ್ತಿರುವ ಮಗ ಟ್ಯಾಗೆನರೀನ್ 19 ವರ್ಷದೊಳಗಿನ ವಿಶ್ವಕಪ್​ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಸುನೀಲ್​ ಜೋಶಿ ಮತ್ತು ಆರ್ಯನ್​ ಜೋಶಿ
ಭಾರತದ ಮಾಜಿ ಸ್ಪಿನ್ನರ್​ ಸುನೀಲ್​ ಜೋಶಿ ಅವರ ಮಗ ಆರ್ಯನ್​ ಜೋಶಿ ಕೂಡ ದೇಶಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಾಹುಲ್​ ಡ್ರಾವಿಡ್​ ಹಾಗೂ ಸುನೀಲ್​ ಜೋಶಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ವಿಶೇಷವಾದರೆ, ಇತ್ತ ಸಮಿತ್​ ಹಾಗೂ ಆರ್ಯನ್​ ಜೋಶಿ ಕೂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ವಿಶೇಷವಾಗಿದೆ.

Comments are closed.