
ಬೆಂಗಳೂರು: ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ತವರು ಮನೆಯಿದ್ದಂತೆ. ಆದರೆ ಆ ತವರು ಮನೆಯಿಂದಲೇ ಕೊಹ್ಲಿ ಔಟ್ ಆಗುತ್ತಾರಾ?!
ಹೀಗೊಂದು ಸುದ್ದಿ ಬಂದಿದೆ. ಇದಕ್ಕೆಲ್ಲಾ ಕಾರಣ ಬಿಸಿಸಿಐ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಗೆ ರೂಪಿಸಿರುವ ಹೊಸ ನಿಯಮ. ಅದರಂತೆ ಈ ಬಾರಿ ಫ್ರಾಂಚೈಸಿಗಳೇ ಆಟಗಾರರ ಸಂಪೂರ್ಣ ಸಂಭಾವನೆಯನ್ನು ನೀಡಬೇಕಾಗುತ್ತದೆ.
ಈ ಬಾರಿಯ ಹರಾಜಿನಲ್ಲಿ ಒಟ್ಟು ಮೂವರು ಮೂಲ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವಿದೆ. ಆದರೆ ಹರಾಜಿನ ಒಟ್ಟು ಮೊತ್ತ ಒಂದು ಫ್ರಾಂಚೈಸಿಗೆ 80 ಕೋಟಿ ರೂ. ನಿಗದಿಯಾಗಿದೆ.
ಆರ್ ಸಿಬಿ ಪರ ಆಡುವ ಕೊಹ್ಲಿಗೆ 15 ಕೋಟಿ ಸಂಭಾವನೆಯಿದೆ. ಒಂದು ವೇಳೆ ಈ ಆವೃತ್ತಿಯಲ್ಲಿ ಆರ್ ಸಿಬಿ ಕೊಹ್ಲಿಯನ್ನು ಉಳಿಸಿಕೊಳ್ಳಬೇಕಾದರೆ 15 ಕೋಟಿ ರೂ. ಸಂಭಾವನೆಯನ್ನು ಸಂಪೂರ್ಣವಾಗಿ ನೀಡಬೇಕು. ಇವರಲ್ಲದೆ, ದ.ಆಫ್ರಿಕಾ ಮೂಲದ ಎಬಿಡಿ ವಿಲಿಯರ್ಸ್ ಗೂ ಸರಿಸುಮಾರು ಇಷ್ಟೇ ಸಂಭಾವನೆ ನೀಡಬೇಕು. ಹೀಗಾದಲ್ಲಿ ಸ್ಟಾರ್ ಆಟಗಾರರಿಗೆಂದೇ ಆರ್ ಸಿಬಿ ತನ್ನ ಪಾಲಿನ ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಾಗುತ್ತದೆ.
ಹಾಗಾದಲ್ಲಿ ಉಳಿದ ಆಟಗಾರರನ್ನು ಖರೀದಿಸಲು ಹಣದ ಅಭಾವ ಎದುರಾಗಬಹುದು. ಒಂದು ವೇಳೆ ಕೊಹ್ಲಿ ಇಷ್ಟೇ ಸಂಭಾವನೆಗೆ ಒಪ್ಪಿದರೆ ಆರ್ ಸಿಬಿಯಲ್ಲೇ ಉಳಿಯಬಹುದು. ಆದರೆ ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಬಹುಬೇಡಿಕೆಯ ಕ್ರಿಕೆಟಿಗರಾದ ಕೊಹ್ಲಿಗೆ ಬೇರೆ ಫ್ರಾಂಚೈಸಿಗಳು ಇದಕ್ಕಿಂತ ದುಬಾರಿ ಮೊತ್ತ ಕೊಟ್ಟರೆ, ಅದನ್ನು ಕೊಹ್ಲಿ ಸ್ವೀಕರಿಸುವುದಿದ್ದರೆ ಆರ್ ಸಿಬಿ ತನ್ನ ನಾಯಕನನ್ನು ಕಳೆದುಕೊಳ್ಳಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ.
Comments are closed.