ಕ್ರೀಡೆ

9000 ರನ್ ಮೈಲುಗಲ್ಲು ದಾಟಿದ ಕಿಂಗ್ ಕೋಹ್ಲಿ

Pinterest LinkedIn Tumblr


ಕಾನ್ಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಾಧನೆ ಮಾಡಿರುವ ಭಾರತ ತಂಡದ ನಾಯಕ ವಿರಾಟ್ ಕೋಹ್ಲಿ, ಏಕದಿನದಲ್ಲಿ ಅತಿ ವೇಗದಲ್ಲಿ 9000 ರನ್ ಮೈಲುಗಲ್ಲು ತಲುಪಿದ ದಾಖಲೆ ಮಾಡಿದ್ದಾರೆ.

ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಷ್ಟೇ ಅತಿ ಹೆಚ್ಚು ಶತಕ ದಾಖಲಿಸಿದವರ ಪೈಕಿ ಸಚಿನ್ ತೆಂಡೂಲ್ಕರ್ (49) ಬಳಿಕ ದ್ವಿತೀಯ ಸ್ಥಾನವನ್ನು ತಲುಪಿದ್ದ ಕೋಹ್ಲಿ, ಇದೀಗ ಮೂರನೇ ಪಂದ್ಯದಲ್ಲೂ ಶತಕ ಸಾಧನೆ ಮಾಡುವ ಮೂಲಕ ಮಗದೊಂದು ಮೈಲುಗಲ್ಲನ್ನು ತಲುಪಿದ್ದಾರೆ.

ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 9000 ರನ್ ಗಳಿಸಿದ ದಾಖಲೆ ಇದೀಗ ಕೋಹ್ಲಿ ಹೆಸರಲ್ಲಿದೆ. ಕೋಹ್ಲಿ 194ನೇ ಇನ್ನಿಂಗ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಎಬಿ ಡಿ ವಿಲಿಯರ್ಸ್ 205 ಇನ್ನಿಂಗ್ಸ್‌ಗಳಲ್ಲಿ 9000 ತಲುಪಿದ್ದರು.

ಅತಿ ವೇಗದಲ್ಲಿ 9000 ರನ್ ಮೈಲುಗಲ್ಲು ತಲುಪಿದ ಬ್ಯಾಟ್ಸ್‌ಮನ್‌ಗಳು
ವಿರಾಟ್ ಕೋಹ್ಲಿ – 194
ಎಬಿ ಡಿ ವಿಲಿಯರ್ಸ್ – 205
ಸೌರವ್ ಗಂಗೂಲಿ – 228
ಸಚಿನ್ ತೆಂಡೂಲ್ಕರ್ – 235
ಬ್ರ್ಯಾನ್ ಲಾರಾ – 239

ಇದು ಏಕದಿನದಲ್ಲಿ ಕೋಹ್ಲಿ ಬ್ಯಾಟ್‌ನಿಂದ ಸಿಡಿದ 32ನೇ ಶತಕವಾಗಿದೆ. ಈ ಮೂಲಕ ನಾಯಕನಾಗಿ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

2017ನೇ ಸಾಲಿನಲ್ಲಿ ಕೋಹ್ಲಿ ಈಗಾಗಲೇ ಆರು ಶತಕಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ನಾಯಕನಾಗಿ ವರ್ಷವೊಂದರಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಗೂ ಪಾತ್ರವಾಗಿದ್ದಾರೆ. ಈ ಸಾಲಿನಲ್ಲಿ ಸೌರವ್ ಗಂಗೂಲಿ (2000), ರಿಕಿ ಪಾಂಟಿಂಗ್ (2003 & 2007), ಗ್ರೇಮ್ ಸ್ಮಿತ್ (2005) ಮತ್ತು ಎಬಿಡಿ ವಿಲಿಯರ್ಸ್ (2015) ತಲಾ ಐದು ಶತಕಗಳನ್ನು ಹೊಂದಿದ್ದಾರೆ.

ಇನ್ನು ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ದಾಖಲಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಇದು ಕಿವೀಸ್ ವಿರುದ್ಧ ಕೋಹ್ಲಿ ಬ್ಯಾಟ್‌ನಿಂದ ದಾಖಲಾದ ಐದನೇ ಶತಕವಾಗಿದೆ. ಕಿವೀಸ್ ವಿರುದ್ಧ ಅಷ್ಟೇ ಶತಕವನ್ನು ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ಹೊಂದಿದ್ದಾರೆ. ಹಾಗೆಯೇ ಅಗ್ರಸ್ಥಾನದಲ್ಲಿರುವ ರಿಕಿ ಪಾಟಿಂಗ್ ಮತ್ತು ವೀರೇಂದ್ರ ಸೆಹ್ವಾಗ್, ಕಿವೀಸ್ ವಿರುದ್ದ ತಲಾ ಆರು ಶತಕಗಳನ್ನು ಗಳಿಸಿದ್ದಾರೆ.

ನಾಯಕನಾಗಿ ವರ್ಷವೊಂದರಲ್ಲಿ ಏಕದಿನದಲ್ಲಿ ಅತಿ ಹೆಚ್ಚು ರನ್ಸ್

ವಿರಾಟ್ ಕೋಹ್ಲಿ – 1437* (2017)
ರಿಕಿ ಪಾಟಿಂಗ್ – 1424 (2007)
ಮಿಸ್ಬಾ ಉಲ್ ಹಕ್ – 1373 (2013)
ಮೊಹಮ್ಮದ್ ಅಜರುದ್ದೀನ್ 1268 (1998)
ಆ್ಯಂಗಲೋ ಮ್ಯಾಥ್ಯೂಸ್ (2014)

Comments are closed.