ಕ್ರೀಡೆ

ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಶ್ರಿಶಾಂತ್‌ ಬೇರೆ ದೇಶದ ಪರವಾಗಿ ಆಡಲು ಸಾಧ್ಯವಿಲ್ಲ: ಎಚ್ಚರಿಕೆ ನೀಡಿದ ಬಿಸಿಸಿಐ

Pinterest LinkedIn Tumblr

ಮುಂಬೈ: ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಕ್ರಿಕೆಟಿಗ ಎಸ್‌.ಶ್ರಿಶಾಂತ್‌ ಬೇರೆ ದೇಶದ ಪರವಾಗಿ ಆಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಎಚ್ಚರಿಸಿದೆ.

2013ರ ಐಪಿಎಲ್‌ ಸ್ಫಾಟ್‌ ಫಿಕ್ಸಿಂಗ್‌ ಹಗರಣ ಸಂಬಂಧ ಶ್ರೀಶಾಂತ್‌ ವಿರುದ್ಧ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ಜಾರಿಗೊಳಿಸಿತ್ತು. ಈ ಕ್ರಮದಿಂದ ನಿರಾಸೆಗೊಳಗಾಗಿದ್ದ ಶ್ರೀಶಾಂತ್‌ ಬೇರೆ ದೇಶದ ಪರ ಆಡುವುದಾಗಿ ಹೇಳಿದ್ದರು.

ಭಾರತ ತಂಡದಲ್ಲಿ ಆಡಲು ಅವಕಾಶ ಸಿಗದಿದ್ದರೆ ವಿದೇಶದ ತಂಡದಲ್ಲಿ ಆಡುವ ಸಾಮರ್ಥ್ಯ ನನಗಿದೆ ಎಂದು ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರು ಶುಕ್ರವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಸವಾಲು ಹಾಕಿದ್ದರು.

ಏಷ್ಯಾನೆಟ್ ಟಿ.ವಿ.ಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ನಾನು ಆಡದಂತೆ ಬಿಸಿಸಿಐ ಆಜೀವ ನಿಷೇಧ ಹೇರಿದೆ. ಅದೊಂದು ಖಾಸಗಿ ಸಂಸ್ಥೆಯಷ್ಟೇ. ಆದರೆ, ಐಸಿಸಿ(ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಯಾವುದೆ ನಿಷೇಧ ಹಾಕಿಲ್ಲ. ಆದ್ದರಿಂದ, ಬೇರೆ ಯಾವುದೆ ದೇಶದ ತಂಡಕ್ಕೂ ಆಡಲು ಅವಕಾಶ ಇದೆ. ನನಗೀಗ 34 ವರ್ಷ. ಕನಿಷ್ಠ ಇನ್ನೂ ಆರು ವರ್ಷಗಳ ಕಾಲ ಆಡುವ ಸಾಮರ್ಥ್ಯ ಇದೆ’ ಎಂದು ಪ್ರತಿಕ್ರಿಯಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಶ್ರಿಶಾಂತ್‌ ಬೇರೆ ದೇಶದ ಪರ ಆಡಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ನಿಯಮದನ್ವಯ ಮಾತೃ ಸಂಸ್ಥೆಯಿಂದ ನಿಷೇಧಕ್ಕೆ ಒಳಗಾಗಿರುವ ಯಾವುದೆ ಆಟಗಾರ ಬೇರೆ ರಾಷ್ಟ್ರದ ಪರವಾಗಿ ಆಟವಾಡಲು ಅವಕಾಶವಿಲ್ಲ’ ಎಂದಿದ್ದಾರೆ.

Comments are closed.