ಕ್ರೀಡೆ

ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 5 ರನ್ ಗಳ ರೋಚಕ ಜಯ ಸಾಧಿಸಿದ ಭಾರತ

Pinterest LinkedIn Tumblr

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 5 ರನ್ ಗಳ ರೋಚಕ ಜಯ ಸಾಧಿಸಿದೆ.

ಭಾರತ ನೀಡಿದ್ದ 145 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಮಾರ್ಗನ್ ಪಡೆ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದು ಕೊಂಡು 139 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ರನ್ ಗಳ ರೋಚಕ ಗೆಲುವು ಸಾಧಿಸಿಸುತು. ಈ ಪಂದ್ಯದ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು 1-1ರ ಅಂತರದಿಂದ ಭಾರತ ಸಸ ಬಲ ಸಾಧಿಸಿದ್ದು, ಫೆಬ್ರವರಿ 1ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಕೈವಶವಾಗಲಿದೆ.

ಭಾರತ ನೀಡಿದ್ದ 145 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಮಾರ್ಗನ್ ಪಡೆ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಇಂಗ್ಲೆಂಡ್ ಪರ ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ರಾಯ್ ಮತ್ತು ಬಿಲ್ಲಿಂಗ್ಸ್ ಉತ್ತಮ ಜೊತೆಯಾಟವಾಡುವ ವಿಶ್ವಾಸ ಮೂಡಿಸಿದರು. ಆದರೆ ಇನ್ನಿಂಗ್ಸ್ ನ ನಾಲ್ಕನೇ ಓವರ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿ ಆಶೀಶ್ ನೆಹ್ರಾ ನಿಜಕ್ಕೂ ಶಾಕ್ ನೀಡಿದ್ದರು. ನೆಹ್ರಾ ಎಸೆದ ಮೊದಲ ಎಸೆತದಲ್ಲೇ ಬಿಲ್ಲಿಂಗ್ಸ್ ಬುಮ್ರಾಗೆ ಕ್ಯಾಚಿತ್ತು ಹೊರನಡೆದರೆ, ಬಳಿಕ ರಾಯ್ ಕೂಡ ರೈನಾಗೆ ಕ್ಯಾಚ್ ನೀಡಿ ಔಟ್ ಆದರು. ಆ ಮೂಲಕ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿತು.

ಬಳಿಕ ಜೊತೆಗೂಡಿದ ರೂಟ್ ಮತ್ತು ನಾಯಕ ಮಾರ್ಗನ್ ಇಂಗ್ಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತುವ ಪ್ರಯತ್ನ ಮಾಡಿದರು. ಆದರೆ 11ನೇ ಓವರ್ ನಲ್ಲಿ ಮಿಶ್ರಾ ಬೌಲಿಂಗ್ ನಲ್ಲಿ ಪಾಂಡ್ಯಾಗೆ ಕ್ಯಾಚಿತ್ತು ಹೊರ ನಡೆದರು. ಈ ವೇಳೆ ಮಾರ್ಗನ್ 17 ರನ್ ಗಳಿಸಿದ್ದರು. ಬಳಿಕ ರೂಟ್ ಜೊತೆಗೂಡಿದ ಸ್ಟೋಕ್ಸ್ ಉತ್ತಮ ಸಾಥ್ ನೀಡಿದರು. 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 38 ರನ್ ಗಳಿಸಿದ್ದ ಸ್ಟೋಕ್ಸ್ ನೆಹ್ರಾ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.

ಬುಮ್ರಾ ಮ್ಯಾಜಿಕಲ್ ಓವರ್ ನಿಂದಾಗಿ ಭಾರತಕ್ಕೆ ಜಯ
ಇನ್ನು ಇಡೀ ಪಂದ್ಯ ಟ್ವಿಸ್ಟ್ ಪಡೆದಿದ್ದೇ ಕೊನೆಯ ಓವರ್ ನಲ್ಲಿ… ಅಂತಿಮ ಓವರ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ ರನ್ ಗಳು ಬೇಕಿತ್ತು. ಆಗ ನಾಯಕ ಕೊಹ್ಲಿ ಧೋನಿ ಸಲಹೆ ಮೇರೆಗೆ ಬುಮ್ರಾಗೆ ಓವರ್ ನೀಡಿದರು. ಬುಮ್ರಾ ಅಂತಿಮ ಓವರ್ ನ ಮೊದಲ ಎಸೆತದಲ್ಲೇ ತಮ್ಮ ಮೇಲೆ ಧೋನಿ ಹಾಗೂ ವಿರಾಟ್ ಕೊಹ್ಲಿ ಹೊಂದಿದ್ದ ಭರವಸೆಯನ್ನು ಹುಸಿಗೊಳಿಸಲಿಲ್ಲ. ಇಂಗ್ಲೆಂಡ್ ಬರ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರೂಟ್ ಅವರನ್ನು ಎಲ್ ಬಿ ಬಲೆಗೆ ಕೆಡವಿದರು. ಬಳಿಕ ಬ್ಯಾಟಿಂಗ್ ಗೆ ಬಂದ ಅಲಿ 2ನೇ ಎಸೆತದಲ್ಲಿ ಒಂದು ರನ್ ಪಡೆದರು. ಮೂರನೇ ಎಸೆತದಲ್ಲಿ ರನ್ ಗಳಿಸುವಲ್ಲಿ ಇಂಗ್ಲೆಂಡ್ ತಂಡ ವಿಫಲವಾಯಿತು. ನಾಲ್ಕನೇ ಎಸೆತದಲ್ಲಿ ಮತ್ತೆ ಬುಮ್ರಾ ಮ್ಯಾಜಿಕ್ ಮಾಡಿದ್ದರು. ಬಟ್ಲರ್ ಅವರನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ ಬುಮ್ರಾ ಪಂದ್ಯದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಮೇಲುಗೈ ಸಾಧಿಸಿಕೊಟ್ಟರು. ಐದನೇ ಎಸೆತದಲ್ಲಿ 1 ರನ್ ನೀಡಿದರು. ಅಂತಿಮ ಎಸೆತದಲ್ಲಿ ಇಂಗ್ಲೆಂಡ್ ಪಡೆಗೆ ಗೆಲ್ಲಲು 6 ರನ್ ಗಳ ಅವಶ್ಯಕತೆ ಇತ್ತು. ಬುಮ್ರಾ ಎಸೆದ ಅಂತಿಮ ಎಸೆತದಲ್ಲೂ ಆಂಗ್ಲ ಪಡೆ ರನ್ ಗಳಿಸಲು ತಿಣುಕಾಡಿತು. ಅಂತಿಮ ಎಸೆತದಲ್ಲಿ ಸಿಕ್ಸರ್ ಬೇಕಿದ್ದಾಗ ಇಂಗ್ಲೆಂಡ್ ಶೂನ್ಯ ಸಂಪಾದನೆಯೊಂದಿಗೆ ಪಂದ್ಯವನ್ನು ಕೈ ಚೆಲ್ಲಿತು.

ಭಾರತದ ಗೆಲುವಿಗೆ ಕಾರಣರಾದ ಬುಮ್ರಾ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

ಅಂತಿಮವಾಗಿ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ 5 ರನ್ ಗಳ ಅಂತರದಲ್ಲಿ ಸೋಲುಕಂಡಿತು. ಭಾರತದ ಪರ ಆಶೀಶ್ ನೆಹ್ರಾ 3 ವಿಕೆಟ್ ಪಡೆಯುವ ಮೂಲಕ ಯಶಸ್ವೀ ಬೌಲರ್ ಎನಿಸಿದರೆ, ಅಂತಿಮ ಘಟ್ಟದಲ್ಲಿ 2ವಿಕೆಟ್ ಪಡೆದ ಬುಮ್ರಾ ಗೆಲುವಿನ ರೂವಾರಿಯಾದರು. ಮಿಶ್ರಾ 1 ವಿಕೆಟ್ ಪಡೆದರು. ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರವರಿ 1 ಬುಧವಾರದಂದು ನಡೆಯಲಿದೆ.

Comments are closed.