ಕ್ರೀಡೆ

ಇಂಗ್ಲೆಂಡ್‌ ತಂಡವನ್ನು ಇನಿಂಗ್ಸ್ ಹಾಗೂ 75 ರನ್‌ಗಳ ಸೋಲುಣಿಸಿ ಭರ್ಜರಿ ಜಯಗಳಿಸಿದ ಭಾರತ; 4–0 ಅಂತರದಲ್ಲಿ ಸರಣಿ ವಶ

Pinterest LinkedIn Tumblr

jadeja_reuters-m

ಚೆನ್ನೈ: ಆಲ್‌ರೌಂಡ್‌ ಪ್ರದರ್ಶನ ಮುಂದುವರಿಸಿದ ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಇನಿಂಗ್ಸ್ ಹಾಗೂ 75 ರನ್‌ಗಳ ಸೋಲುಣಿಸಿ ಭರ್ಜರಿ ಜಯಗಳಿಸಿದೆ. ಸರಣಿಯನ್ನು 4-0 ಅಂತರದಿಂದ ಗೆದ್ದಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಆಂಗ್ಲರು ಮೊದಲ ಇನಿಂಗ್ಸ್‌ನಲ್ಲಿ 477ರನ್‌ ಗಳ ಬೃಹತ್‌ ಮೊತ್ತ ದಾಖಲಿಸಿ ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆಯಲ್ಲಿತ್ತು. ಆದರೆ ಭಾರತ ಪರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕರ್ನಾಟಕದ ಕೆ.ಎಲ್‌ ರಾಹುಲ್‌ ಹಾಗೂ ಕರುಣ್‌ ನಾಯರ್‌ ಅದಕ್ಕೆ ಅವಕಾಶ ನೀಡಲಿಲ್ಲ.

ಭಾರತದ ಕಡೆ ರವೀಂದ್ರ ಜಡೇಜಾ 7 ವಿಕೆಟ್ ಕಬಳಿಸಿ, ಅಮೋಘ ಬೌಲಿಂಗ್ ಮಾಡಿದ್ದರೆ, ಉಮೇಶ್ ಯಾದವ್, ಇಶಾಂತ್ ಶರ್ಮ ಮತ್ತು ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದಿನದಾಟ ಮುಗಿಯಲು ಇನ್ನು ಕೇವಲ 7 ಓವರ್ ಗಳು ಉಳಿದಿದ್ದಾಗ, ಜಡೇಜಾ ಬೌಲಿಂಗ್ ನಲ್ಲಿ, ಕರುಣ್ ನಾಯರ್ ಹಿಡಿದ ಕ್ಯಾಚ್ ನಿಂದ ಕೊನೆಯ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಭಾರತೀಯ ಆಟಗಾರರ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ನೆನ್ನೆ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಗಳಿಸಿ, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 759 ರನ್ ಗಳ ದೊಡ್ಡ ಮೊತ್ತವನ್ನು ಪೇರಿಸಲು ಸಹಕರಿಸಿದ್ದರು. ಮತ್ತೊಬ್ಬ ಕನ್ನಡಿಗ ಕೆ ಎಲ್ ರಾಹುಲ್ ಕೂಡ ೧೯೯ ರನ್ ಗಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Comments are closed.