ಕ್ರೀಡೆ

ದಾಖಲೆ ನಿರ್ಮಿಸಿದ್ದ ಯುವ ಕ್ರಿಕೆಟಿಗ ಪ್ರಣವ್ ಧನವಾಡೆ ಮೇಲೆ ಪೊಲೀಸರ ಹಲ್ಲೆ

Pinterest LinkedIn Tumblr

pranav-dhanawade

ಮುಂಬೈ: ಒಂದೇ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 1009 ರನ್ ಗಳನ್ನು ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಯುವ ಕ್ರಿಕೆಟಿಗ ಪ್ರಣವ್ ಧನವಾಡೆ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಕಲ್ಯಾಣ್ ನಲ್ಲಿರುವ ಸುಭಾಷ್ ಮೈದಾನದಲ್ಲಿ ಶನಿವಾರ ಸಂಜೆ ಕ್ರಿಕೆಟ್ ತರಬೇತಿ ನಡೆಸುತ್ತಿದ್ದ ಕ್ರಿಕೆಟಿಗ ಪ್ರಣವ್ ಧನವಾಣೆ ಹಾಗೂ ಆತನ ತಂದೆ ಮೇಲೆ ಪೊಲೀಸರು ಹಲ್ಲೆ ಮಾಡಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಸುಭಾಷ್ ಮೈದಾನದಲ್ಲಿ ಶನಿವಾರ ಸಂಜೆ ಸುಮಾರು 6.30ರ ವೇಳೆಯಲ್ಲಿ ಪ್ರಣವ್ ಧನವಾಡೆ ತರಬೇತಿ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಪೊಲೀಸರು ಕೇಂದ್ರ ಸಚಿವರು ಇಲ್ಲಿಗೆ ಆಗಮಿಸುತ್ತಾರೆ ಕೂಡಲೇ ಮೈದಾನ ಖಾಲಿ ಮಾಡುವಂತೆ ಧನವಾಡೆ ಮತ್ತು ಅವರ ತಂದೆಗೆ ಸೂಚನೆ ನೀಡಿದ್ದಾರೆ. ಆಗ ಧನವಾಡೆ ತಾನು ತರಬೇತಿ ನಡೆಸುತ್ತಿದ್ದು ಇನ್ನು ಐದು ನಿಮಿಷದಲ್ಲಿ ತಾವು ಹೊರಡುವುದಾಗಿ ಹೇಳಿದ್ದಾರೆ. ಆದರೆ ಧನವಾಡೆ ಮಾತನ್ನು ಕೇಳದ ಮಪ್ತಿಯಲ್ಲಿದ್ದ ಪೊಲೀಸ್ ಅಧಿಕಾರಿ ಕಡಮ್ ಏಕಾಏಕಿ ಧನವಾಡೆ ಕಪಾಳಕ್ಕೆ ಭಾರಿಸಿದ್ದಾರೆ. ಪ್ರಣವ್ ಧನವಾಡೆಯ ದಾಖಲೆ ಕುರಿತು ಮಾಹಿತಿ ಇದ್ದ ಸಬ್ ಇನ್ಸ್ ಪೆಕ್ಟರ್ ಕಡಮ್ ಮೈದಾನ ಬಿಟ್ಟು ಹೋಗದಿದ್ದರೆ ಇಬ್ಬರ ಮೇಲೂ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವುದಾಗಿ ಬೆದರಿಕೆ ಹಾಕಿದ್ದಾನೆ.

ಆದರೆ ಪೊಲೀಸ್ ನಡವಳಿಕೆಯನ್ನು ವಿರೋಧಿಸಿದ ಧನವಾಡೆ ತಂದೆ ಅದಕ್ಕೆ ಪ್ರತಿರೋಧ ತೋರಿದ್ದಾರೆ. ಇದರಿಂದ ಮತ್ತಷ್ಟು ಕುಪಿತನಾದ ಪೊಲೀಸ್ ಇಬ್ಬರನ್ನೂ ಜೀಪಿನಲ್ಲಿದ್ದ ಹಿರಿಯ ಅಧಿಕಾರಿಯ ಬಳಿ ಕರೆದೊಯ್ದಿದ್ದಾರೆ. ಬಳಿಕ ಠಾಣೆಗೆ ಕರೆದುಕೊಂಡು ಬಾ ಅವರಿಗೆ ಸರಿಯಾದ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಠಾಣೆಯಲ್ಲಿದ್ದ ಇನ್ಸ್ ಪೆಕ್ಟರ್ ಸೂರ್ಯವಂಶಿ ಅಧಿಕಾರಿ ಕೂಡ ಪ್ರಣವ್ ಹಾಗೂ ಅವರ ತಂದೆಯನ್ನು ನಿಂದಿಸಿದ್ದಾರೆ.

ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ. ಅಲ್ಲದೆ ಕ್ರಿಕೆಟಿಗ ಪ್ರಣವ್ ಹಾಗೂ ಅವರ ತಂದೆ ಪರವಾಗಿ ನಿಂತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಸಚಿವರ ಹೆಲಿಕಾಪ್ಟರ್ ಇಳಿಸಲು ಪ್ರತಿಭಾವಂತ ಕ್ರಿಕೆಟಿಗನ ತರಬೇತಿಗೆ ಅಡ್ಡಿಪಡಿಸಿದ ಪೊಲೀಸರ ಕ್ರಮ ಇದೀಗ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.

Comments are closed.