ಮೊಹಾಲಿ: ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಚೆಂಡನ್ನು ವಿರೂಪಗೊಳಿಸಿದ್ದರು ಎಂಬ ಆರೋಪವನ್ನು ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ತಳ್ಳಿ ಹಾಕಿದ್ದಾರೆ.
‘ರಾಜ್ಕೋಟ್ನಲ್ಲಿ ನ. 13ರಿಂದ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ ಅವರು ಸಿಹಿ ತಿನಿಸಿನ ಶೇಷವನ್ನು ಬಳಸಿ ಚೆಂಡಿನ ಹೊಳಪು ಹೆಚ್ಚಿಸಿದ್ದರು. ಇದು ಐಸಿಸಿ ನಿಯಮದ ಪ್ರಕಾರ ಅಪರಾಧ. ಟಿವಿ ತುಣುಕುಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಇಂಗ್ಲೆಂಡ್ನ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.
ಈ ಆರೋಪವನ್ನು ತಳ್ಳಿಹಾಕಿರುವ ಐಸಿಸಿ, ಕೊಹ್ಲಿ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲು ನಿರಾಕರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಕುಂಬ್ಳೆ, ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಪಂದ್ಯದ ನಿಯಮಗಳನ್ನು ಉಲ್ಲಂಘಿಸಿದ್ದೇ ಆದರೆ ಪಂದ್ಯದ ತೀರ್ಪುಗಾರರು ಗಮನಿಸಿ ಕ್ರಮ ಕೈಗೊಳ್ಳುತ್ತಿದರು. ಅದನ್ನು ಹೊರತುಪಡಿಸಿ ಗಾಳಿ ಸುದ್ದಿಯನ್ನು ಹಬ್ಬಿಸಿರುವುದನ್ನು ನಂಬಲು ಅಸಾಧ್ಯವಾದದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಅವರ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಅತಂಕ ಪಡುವ ಅಗತ್ಯವಿಲ್ಲ. ಗಾಳಿ ಸುದ್ದಿ ಪ್ರಕಟಿಸುವಂತಹ ಮಾಧ್ಯಮಗಳನ್ನು ಸಾರ್ವಜನಿಕರು ತಿರಸ್ಕರಿಸುತ್ತಾರೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.
Comments are closed.