ಕ್ರೀಡೆ

ಮೊದಲ ಬಾರಿ ಏಷ್ಯನ್ ಹಾಕಿ ಚಾಂಪಿಯನ್ಸ್‌ಟ್ರೋಫಿ ಗೆದ್ದುಕೊಂಡ ಮಹಿಳೆಯರ ತಂಡ

Pinterest LinkedIn Tumblr

hocky

ಸಿಂಗಪುರ: ಭಾರತದ ವನಿತೆಯರ ತಂಡವು ಇದೇ ಮೊದಲ ಬಾರಿ ಏಷ್ಯನ್ ಚಾಂಪಿಯನ್ಸ್‌ಟ್ರೋಫಿ ಗೆದ್ದುಕೊಂಡಿದೆ.

ಶನಿವಾರ ಇಲ್ಲಿ ನಡೆದ 4ನೇ ಏಷ್ಯನ್ ಚಾಂಪಿಯನ್‌ಷಿಪ್ ಟೂರ್ನಿಯ ರೋಚಕ ಫೈನಲ್‌ನಲ್ಲಿ ಭಾರತ ತಂಡವು 2–1 ಗೋಲುಗಳಿಂದ ಚೀನಾ ತಂಡದ ವಿರುದ್ಧ ಗೆದ್ದಿತು. 60ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ದೀಪಿಕಾ ಹೊಡೆದ ರಿಬೌಂಡ್‌ನಲ್ಲಿ ಸಿಕ್ಕ ಗೋಲು ತಂಡದ ಜಯಭೇರಿಗೆ ಕಾರಣವಾಯಿತು.

ಪಂದ್ಯದ 13ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ್ತಿ ದೀಪ್ ಗ್ರೇಸ್ ಎಕ್ಕಾ ಅವರು ಪೆನಾಲ್ಟಿಕ ಕಾರ್ನರ್‌ಅನ್ನು ಗೋಲಿನಲ್ಲಿ ಪರಿವರ್ತಿಸಿದ್ದರು. ತಂಡವು 1–0 ಮುನ್ನಡೆಯನ್ನು 31 ನಿಮಿಷಗಳವರೆಗೆ ಕಾಯ್ದುಕೊಂಡಿತ್ತು.

ರಕ್ಷಣಾ ವಿಭಾಗದ ಆಟಗಾರ್ತಿಯರು ಎದುರಾಳಿ ತಂಡದ ಚುರುಕಿನ ದಾಳಿ ಯನ್ನು ತಡೆಯುವಲ್ಲಿ ಯಶಸ್ವಿಯಾಗಿ ದ್ದರು. ಆದರೆ, 44ನೇ ನಿಮಿಷದಲ್ಲಿ ಚೀನಾದ ಸ್ಟ್ರೈಕರ್ ಝಾಂಗ್ ಮೆಂಗ್ಲಿಂಗ್ ಅವರು ಹೊಡೆದ ಗೋಲಿನಿಂದಾಗಿ ಪಂದ್ಯವು 1–1ರ ಸಮಸ್ಥಿತಿಗೆ ಬಂದಿತು.

ನಂತರದ ಅವಧಿಯಲ್ಲಿ ಎರಡೂ ತಂಡಗಳು ಬಿರುಸಿನ ಹಣಾಹಣಿ ನಡೆಸಿದವು. ಆದರೆ, ಇಬ್ಬರಿಗೂ ಗೋಲು ಒಲಿಯಲಿಲ್ಲ. ಆದರೆ, 60ನೇ ನಿಮಿಷದಲ್ಲಿ ದೀಪಿಕಾ ಅವರ ಕೈಚಳಕವು ಭಾರತಕ್ಕೆ ಜಯ ತಂದುಕೊಟ್ಟಿತು

ಲೀಗ್ ಹಂತದಲ್ಲಿ ಭಾರತ ತಂಡವು ಕೊರಿಯಾ, ಜಪಾನ್, ಚೀನಾ ಮತ್ತು ಮಲೇಷ್ಯಾ ತಂಡಗಳನ್ನು ಸೋಲಿಸಿತ್ತು. ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸಿತ್ತು. ಶುಕ್ರವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಚೀನಾ ಎದುರು ಸೋತಿತ್ತು. ಆದರೆ, ಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿತು. ವನಿತೆಯರ ತಂಡವು 2013ರಲ್ಲಿ ಫೈನಲ್‌ತಲುಪಿತ್ತು. ಆದರೆ, ಜಪಾನ್ ಎದುರು ಸೋತಿತ್ತು. 2010ರಲ್ಲಿ ನಡೆದಿದ್ದ ಮೊಟ್ಟಮೊದಲ ಟೂರ್ನಿಯಲ್ಲಿ ಭಾರತ ತಂಡವು ಮೂರನೇ ಸ್ಥಾನ ಪಡೆದಿತ್ತು.

ಇತ್ತೀಚೆಗೆ ಪುರುಷರ ತಂಡವು ಮಲೇಷ್ಯಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು. ಇದೀಗ ವನಿತೆಯರ ತಂಡವು ದೇಶದ ಹಾಕಿಪ್ರೇಮಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ.

ವನಿತೆಯರ ಸಾಧನೆಯನ್ನು ಮೆಚ್ಚಿ ದೇಶದ ಕ್ರೀಡಾಲೋಕದ ಗಣ್ಯರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

Comments are closed.