ನವದೆಹಲಿ: ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡ ಅಪ್ರತಿಮ ಕ್ರಿಕೆಟಿಗ. ಎಲ್ಲ ಕ್ರಿಕೆಟಿಗರಿಗೂ ಒಂದೊಂದು ಅಡ್ಡ ಹೆಸರು ಇದೆ. ಅಂತೆಯೇ ವಿರಾಟ್ ಕೊಹ್ಲಿಗೂ ಅಡ್ಡ ಹೆಸರೂ ಇದೆ. ಅದು ಟೀಂ ಇಂಡಿಯಾದ ಡ್ರೆಸಿಂಗ್ ರೂಮ್ನಲ್ಲಿ ಈಗ ಭಾರೀ ಜನಪ್ರಿಯವಾಗಿದೆ. ಅದೊಂದು ಹಣ್ಣಿನ ಹೆಸರು ಎನ್ನುವುದು ವಿಶೇಷ. ಕೊಹ್ಲಿಯನ್ನು ಈಗಲೂ ಆಟಗಾರರು ಅದೇ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಆ ಹೆಸರು ‘ಚಿಕ್ಕೂ’ (ಸಪೋಟಾ) ಎಂದಾಗಿದೆ. ಈ ಹೆಸರಿಡಲು ಕಾರಣವೇನು?
ಹಿರಿಯ ಪತ್ರಕರ್ತರೊಬ್ಬರು ತಮ್ಮ ಆತ್ಮಕಥೆಯಲ್ಲಿ ಕೊಹ್ಲಿಗೆ ಅಡ್ಡ ಹೆಸರು ಹುಟ್ಟಿದ ಕಥೆಯನ್ನು ಬರೆದಿದ್ದಾರೆ. ಆಗ ಕೊಹ್ಲಿ ದಿಲ್ಲಿ ರಣಜಿ ತಂಡದ ಆಟಗಾರನಾಗಿದ್ದ ಸಮಯ. ಸ್ಟಾರ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಭಾಟಿಯಾ ಮತ್ತಿತರ ಅನುಭವಿ ಆಟಗಾರರ ಜತೆ ತಂಡದಲ್ಲಿ ಕೊಹ್ಲಿ ಕೂಡ ಸ್ಥಾನ ಪಡೆದಿದ್ದರು.
ಮುಂಬೈ ವಿರುದ್ಧ ದಿಲ್ಲಿ ಪಂದ್ಯವನ್ನಾಡುತ್ತಿತ್ತು. ಒಂದು ದಿನ ಕೊಹ್ಲಿ ತಾವು ತಂಗಿದ್ದ ಹೋಟೆಲ್ಗೆ ಬಂದವರೇ ವಿಶಿಷ್ಟ ಕೇಶ ವಿನ್ಯಾಸವನ್ನು ತೋರಿಸಿದರು. ಹೇಗಿದೆ ಹೇಳಿ ಎಂದು ಸಹಾಯಕ ಕೋಚ್ಗೆ ಕೇಳಿದ್ದರು. ಆಗ ತಂಡದ ಸಹಾಯಕ ಕೋಚ್ ಆಗಿದ್ದ ಅಜಿತ್ ಚೌಧುರಿ ಪ್ರತಿಕ್ರಿಯಿಸಿ, ಕೆಟ್ಟದಾಗಿಲ್ಲ…ನೀನು ನೋಡಲು ‘ಚಿಕ್ಕೂ’ (ಸಪೋಟಾ ಹಣ್ಣಿನಂತೆ) ರೀತಿ ಕಾಣುತ್ತಾ ಇದ್ದೀಯಾ ಎಂದಿದ್ದರು. ಈ ಹೆಸರು ಅಂದಿನಿಂದ ಕೊಹ್ಲಿಗೆ ಶಾಶ್ವತವಾಗಿ ಉಳಿದುಕೊಂಡುಬಿಟ್ಟಿದೆ.