ಮನೋರಂಜನೆ

ಕನ್ನಡ ‘ಬಿಗ್ ಬಾಸ್-8’ ಮುಡಿಗೇರಿಸಿಕೊಂಡ ಮಂಜು ಪಾವಗಡ

Pinterest LinkedIn Tumblr

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 8ರ ಅದ್ಬುತವಾದ ಒಟ್ಟಾರೆ 120 ದಿನಗಳ ಭರ್ಜರಿ ಪ್ರಯಾಣ ಕೊನೆಗೊಂಡಿದ್ದು, ವಿಜೇತರಾಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.

ರವಿವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ್ ವಿನ್ನರನ್ನು ಘೋಷಿಸಿದರು. ದಿವ್ಯಾ ಯು ಮನೆಯಿಂದ ಹೊರಬಂದ ಬಳಿಕ ಕಾಮಿಡಿ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಮಂಜು ಪಾವಗಡ ಹಾಗೂ ಅರವಿಂದ್ ನಡುವೆ ಭಾರೀ ಪೈಪೋಟಿ ನಡೆದಿತ್ತು.

ಮಂಜು ಪಾವಗಡ ಮೇಲೆ ಹಲವು ಮಂದಿ ನಿರೀಕ್ಷೆ ಹೊಂದಿದ್ದರು. ಅದರಂತೆಯೇ ವಿಜಯಿ ಆಗಿದ್ದಾರೆ. ಉಡುಪಿಯ ಅರವಿಂದ್ ರನರ್ ಅಪ್ ಗೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

ಬಿಗ್‍ಬಾಸ್ ಮನೆಯಲ್ಲಿ ನಗು ಇದೆ ಎಂದರೆ ಅಲ್ಲಿ ಮಂಜು ಇದ್ದೇ ಇರುತ್ತಾರೆ. ಮಂಜು ಇದ್ದಲ್ಲಿ ನಗುವಿಗೆ, ಮನರಂಜನೆಗೇನು ಕಮ್ಮಿ ಇಲ್ಲ ಎನ್ನುವ ಮಾತು ಬಿಗ್‍ಬಾಸ್ ವೀಕ್ಷಕರು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದರು. ಈ ಮಾತಿನಂತೆ ಮನರಂಜನೆ, ಟಾಸ್ಕ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಮಂಜು ಅವರು ಅತಿ ಹೆಚ್ಚು ವೋಟು ಪಡೆಯುವ ಮೂಲಕ ವಿನ್ನರ್ ಆಗಿದ್ದಾರೆ.

ಬಿಗ್‍ಬಾಸ್ ಫಿನಾಲೆಯಲ್ಲಿ ಟಾಪ್ 5 ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಮಂಜು, ಮತ್ತು ಅರವಿಂದ್ ಮಧ್ಯೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಯಾರು ಎಂದು ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ.

ಗಂಭೀರ, ಹೋರಾಟದ ಮನೋಭಾವ ಹೊಂದಿರುವ ಸ್ಪರ್ಧಿಗಳ ಮಧ್ಯೆ ಮಂಜು ಸದಾ ಹಾಸ್ಯ ಮಾಡುತ್ತಾ, ಎಲ್ಲರಿಗೂ ಭರಪೂರ ಮನರಂಜನೆ ನೀಡುತ್ತಾ ಬಂದಿದ್ದರು. ಜಾಗ ಯಾವುದೇ ಆಗಲಿ, ಎದುರಿಗಿರುವ ವ್ಯಕ್ತಿ ಹೇಗೆ ಇರಲಿ. ಆ ಸಮಯದಲ್ಲೇ ಪಂಚಿಂಗ್ ಡೈಲಾಗ್ ಹೊಡೆದು ನಗಿಸಿ ತಿರುಗೇಟು ನೀಡುತ್ತಿದ್ದರು. ಈ ವಿಶಿಷ್ಟ ವ್ಯಕ್ತಿತ್ವ ವೀಕ್ಷಕರಿಗೆ ಇಷ್ಟವಾಗಿ ಈಗ ಮಂಜು ಕೊರಳಿಗೆ ಜಯಮಾಲೆಯನ್ನು ಹಾಕಿದ್ದಾರೆ.

ಬಿಗ್‍ಬಾಸ್ ಮೊದಲ ಇನ್ನಿಂಗ್ಸ್‍ನಲ್ಲಿ ದಿವ್ಯಾ ಸುರೇಶ್ ಜತೆ ಮಂಜು ಹೆಚ್ಚು ಆಪ್ತವಾಗಿದ್ದರು. ಹೀಗಾಗಿ ಅವರಿಗೆ ಇದು ಗೇಮ್ ಆಡಲು, ಮನರಂಜನೆ ನೀಡುವಲ್ಲಿ ಸ್ವಲ್ಪ ತೊಂದರೆ ಆಗಿತ್ತು. ವೀಕ್ಷಕರು ಮಂಜು ಮನರಂಜನೆ ಒಬ್ಬರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳುತ್ತಿದ್ದರು. ಕೆಲ ಕಾಲ ಮನರಂಜನೆ ನೀಡುವುದನ್ನೇ ನಿಲ್ಲಿಸಿದ್ದರು. ಆದರೆ, ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಎಲ್ಲರ ಜೊತೆ ಬೆರೆಯಲು ಆರಂಭಿಸಿದ್ದು ಮಂಜು ಅವರಿಗೆ ನೆರವಾಯಿತು.

ಎಲ್ಲ ಕಡೆಗಳಲ್ಲೂ ಸ್ವತಂತ್ರವಾಗಿ ಗುರುತಿಸಿಕೊಂಡರು, ಎಲ್ಲ ಸ್ಪರ್ಧಿಗಳ ಜೊತೆಗೆ ಬೆರೆಯಲು ಪ್ರಾರಂಭಿಸಿದರು. ಆಗ ಮನೆ ಮಂದಿ ಮಂಜುವನ್ನು ಮೆಚ್ಚಿಕೊಳ್ಳಲು ಪ್ರಾರಂಭಿಸಿದರು. ಆದರೆ ಆಗಾಗ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಮಂಜು ವಿರುದ್ಧವಾಗಿ ಮಾತನಾಡಿದ್ದರೂ ಅದು ಯಾವುದನ್ನು ತಲೆಗೆ ಹಾಕಿಕೊಳ್ಳದೇ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

Comments are closed.