ಮನೋರಂಜನೆ

ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು..!: ಯಾಕೆ ಗೊತ್ತಾ?

Pinterest LinkedIn Tumblr

​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್​ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಮೂರು ಲಕ್ಷದ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಸಂಜನಾ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. 84 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಸಂಜನಾ ಅವರಿಗೆ ಈಗ ಜಾಮೀನು ಸಿಕ್ಕಿದೆ. ಜೈಲಿನಲ್ಲಿರುವ ಸಂಜನಾ ಅವರಿಗೆ ಆರೋಗ್ಯ ಸರಿಯಲ್ಲದ ಕಾರಣದಿಂದಾಗಿ ಜಾಮೀನು ನೀಡಬೇಕೆಂದು ಕೆಲವೇ ದಿನಗಳ ಹಿಂದೆಯಷ್ಟೆ ನಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಸಂಜನಾ ಅವರ ಆರೋಗ್ಯ ತಪಾಸಣೆಗೆ ಅನುಮತಿ ನೀಡಿ, ಅದರ ವರದಿಯನ್ನು ಡಿ.10ರ ಒಳಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಸಂಜನಾ ಅವರನ್ನು ನಗರದ ವಾನಿ ವಿಲಾಸ್​ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿರುವ ಸಂಜನಾ ಅವರನ್ನು ತಪಾಸಣೆ ಮಾಡಿ ವೈದ್ಯರು ನೀಡಿದ್ದ ವರದಿಯ ಆಧಾರದ ಮೇಲೆ ಹೈಕೋರ್ಟ್​ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ ಅವರನ್ನು ಬಂಧಿಸಿದ ನಂತರ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸೆ. 9ರಂದು ಸಿಸಿಬಿ ಪೊಲೀಸರು ಸಂಜನಾ ಅವರನ್ನು ಬಂಧಿಸಿ, ಸೆ. 16ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.

ಪರಪ್ಪನ ಅಗ್ರಹಾರ ಸೇರುತ್ತಿದ್ದಂತೆಯೇ ಸಂಜನಾ ಹಾಗೂ ರಾಗಿಣಿ, ಜೈಲಿನಲ್ಲಿ ಕೊಡುತ್ತಿದ್ದ ಊಟ ಮಾಡದೆ, ಚಿಕನ್​ ಬೇಕೆಂದು ಪಟ್ಟು ಹಿಡಿದು ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದರು. ಪರಪ್ಪನ ಅಗ್ರಹಾರ ಸೇರಿದ ನಂತರ ಸಂಜನಾ, ರಾಗಿಣಿ ಹಾಗೂ ಇತರೆ ಆರೋಪಿಗಳು ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ಕಡೆ ಜಾಮೀನು ಅರ್ಜಿ ವಜಾಗೊಂಡಿತ್ತು.

Comments are closed.