ಮನೋರಂಜನೆ

7.20 ಕೋಟಿಗೆ ಮಾರಾಟವಾದ ಕನ್ನಡದ ಪೊಗರು ಹಿಂದಿ ಡಬ್ಬಿಂಗ್ ರೈಟ್ಸ್!

Pinterest LinkedIn Tumblr


ಪೊಗರು… ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಸಿನಿಮಾ. ಲೇಟಾದರೂ ಲೇಟೆಸ್ಟ್ ಆಗಿ ತೆರೆಗೆ ಬರಲು ರೆಡಿಯಾಗಿದ್ದು, ದಿನ ಕಳೆದಂತೆ ಕ್ರೇಜ್ ಕೂಡ ಹೆಚ್ಚುತ್ತಲೇ ಇದೆ. ಕನ್ನಡ, ತೆಲುಗು ಮಾತ್ರವಲ್ಲ ಬಾಲಿವುಡ್ ನಲ್ಲೂ ಪೊಗರು ಚಿತ್ರಕ್ಕೆ ಸಖತ್​ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಪೊಗರು ಹಿಂದಿ ಡಬ್ಬಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ. ಹೌದು, ಬಾಲಿವುಡ್ ನ ಹೆಸರಾಂತ ಆರ್ ಕೆ ದುಗ್ಗಲ್ ಸ್ಟುಡಿಯೋಸ್ ಸಂಸ್ಥೆ ಬರೋಬ್ಬರಿ 7.20 ಕೋಟಿ ರೂಪಾಯಿಗೆ ಪೊಗರು ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಖರೀದಿಸಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ ವಾಹಿನಿಗೆ ಸ್ಪಷ್ಟಪಡಿಸಿದ ನಿರ್ದೇಶಕ ನಂದ ಕಿಶೋರ್, ಪ್ರೀ ರಿಲೀಸ್ ಬ್ಯುಸಿನೆಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಡೈಲಾಗ್ ಟ್ರೇಲರ್ ಹಾಗೂ ಖರಾಬು ಸಾಂಗ್ ಮೂಲಕ ಪೊಗರು ಬಾಕ್ಸಾಫಿಸ್​ ರೂಲ್ ಮಾಡುವ ನಿರೀಕ್ಷೆ ಮೂಡಿಸಿದೆ. ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲ ಟಾಲಿವುಡ್​ನಲ್ಲೂ ಪೊಗರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈಗ ಬಾಲಿವುಡ್ ಅಂಗಳದಲ್ಲೂ ಕನ್ನಡದ ಆಕ್ಷನ್ ಪ್ರಿನ್ಸ್ ಕ್ರೇಜ್ ಶುರುವಾಗಿರುವುದು ಚಿತ್ರತಂಡಕ್ಕೆ ಹೊಸ ಭರವಸೆ ನೀಡಿದೆ.

ಸೂಪರ್ ಸ್ಟಾರ್​ಗಳ ಸಿನಿಮಾಗಳಿಗೆ ದೊಡ್ಡ ಮೊತ್ತ ನೀಡಿ ಡಬ್ಬಿಂಗ್ ರೈಟ್ಸ್ ಖರೀದಿಸುವುದು ಸಾಮಾನ್ಯ. ಆದರೆ ಕೇವಲ ನಾಲ್ಕನೇ ಚಿತ್ರಕ್ಕೆ ದೊಡ್ಡ ಮೊತ್ತ ಪಡೆಯುವ ಮೂಲಕ ಆ್ಯಕ್ಷನ್ ಪ್ರಿನ್ಸ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಆರ್ ಕೆ ದುಗ್ಗಲ್ ಸ್ಟುಡಿಯೋಸ್ ಸಂಸ್ಥೆಯವರು ಈ ಹಿಂದೆಯೂ ಹಲವು ಕನ್ನಡ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ಖರೀದಿಸಿದ್ದಾರೆ.

ಭರಾಟೆ, ಮಾಣಿಕ್ಯ, ಬಚ್ಚನ್, ಟೋಪಿವಾಲ, ಶತ್ರು, ವರದ ನಾಯಕ ಸೇರಿದಂತೆ ಹಲವು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಓಟಿಟಿ, ಟಿವಿ ಹಾಗೂ ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಿದ್ದಾರೆ.

ಇನ್ನು ಪೊಗರು ರಿಲೀಸ್ ವಿಷಯಕ್ಕೆ ಬರುವುದಾದರೆ ಇದೇ ವರ್ಷ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಡಿಸೆಂಬರ್ 26ರಂದು ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು. ಹಾಗೇನಾದರೂ ಅದು ಸಾಧ್ಯವಾಗದಿದ್ದಲ್ಲಿ 2021ರ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಜನವರಿ 14ರಂದು ಪೊಗರು ರಿಲೀಸ್ ಫಿಕ್ಸ್ ಎನ್ನಲಾಗಿದೆ.

Comments are closed.