
ಕೆಜಿಎಫ್ ಚಾಪ್ಟರ್ 2. ಯಶ್ ಅಭಿನಯದ ಚಿತ್ರದ ಚಿತ್ರೀಕರಣ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಆರಂಭವಾಗಿದೆ. ಸಿನಿಮಾದ ವಿಲನ್ ಅಧೀರ ಪಾತ್ರಧಾರಿ ಸಂಜಯ್ ದತ್ ಮತ್ತೆ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಈ ಹಿಂದೆ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗುತ್ತಿದ್ದಂತೆಯೇ ಅಭಿಮಾನಿಗಳು ಆತಂಕದಲ್ಲಿದ್ದರು. ಆದರೆ ಸಂಜಯ್ ದತ್ ಈಗಾಗಲೇ ಮಾತು ಕೊಟ್ಟಂತೆ ಸಹಿ ಮಾಡಿರುವ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡುತ್ತಿದ್ದಾರೆ. ಈ ಹಿಂದೆಯಷ್ಟೆ ಯಶ್ ರಾಜ್ ಸ್ಟುಡಿಯೋದಲ್ಲಿ ಶಂಶೇರಾ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ನಂತರ ಮತ್ತೆ ಕೀಮೋ ಮಾಡಿಸಿಕೊಂಡು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದರು.
ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಮೊದಲಿನಂತೆ ಬಾಡಿ ಬಿಲ್ಡ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಸಂಜಯ್ ದತ್ ಅಕ್ಟೋಬರ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಹೇರ್ ಸ್ಟೈಲ್ ಜೊತೆಗೆ ಕೆಜಿಎಫ್ ಚಿತ್ರಕ್ಕೆ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆಯೂ ಮಾಹಿತಿ ನೀಡಿದ್ದರು.
ನವೆಂಬರ್ನಲ್ಲಿ ಹೈದರಾಬಾದಿನಲ್ಲಿ ನಡೆದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ನಲ್ಲಿ ಭಾಗಿಯಾಗುವುದಾಗಿ ಹೇಳಿದ್ದ ಸಂಜಯ್ ದತ್, ಆಗ ಚಿತ್ರೀಕರಣಕ್ಕೆ ಹಾಜರಾಗಲಿಲ್ಲ. ಅದಕ್ಕೆ ಈಗ ಅಧೀರ ಕೆಜಿಎಫ್ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಹೌದು, ಡಿಸೆಂಬರ್ನಲ್ಲಿ ಹೈದರಾಬಾದಿನಲ್ಲಿ ಕೆಜಿಎಫ್ 2 ಶೂಟಿಂಗ್ ನಡೆಯಲಿದ್ದು, ಸಂಜು ಬಾಬಾ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರಂತೆ.
ಡಿಸೆಂಬರ್ನಲ್ಲಿ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ರಾಕಿ ಭಾಯ್ ಹಾಗೂ ಅಧೀರ ಎದುರಾಗುವ ದೃಶ್ಯಗಳ ಶೂಟಿಂಗ್ ನಡೆಯಲಿದೆಯಂತೆ. ಇನ್ನು ಈಗಾಗಲೇ ಕ್ಯಾನ್ಸರ್ನಿಂದ ಗುಣಮುಖರಾಗಿದ್ದು, ಹೋರಾಟದಲ್ಲಿ ಗೆದ್ದಿದ್ದೇನೆ ಎಂದು ಸಂಜಯ್ ದತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕ್ರೂರಿ ಅಧೀರನ ಪಾತ್ರದಲ್ಲಿ ಮಿಂಚಲು ಸಕಲ ಸಿದ್ಧತೆಗಳೊಂದಿಗೆ ಚಿತ್ರತಂಡ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈಗಾಗಲೇ ಜಿಮ್ನಲ್ಲಿ ಬೆವರಿಳಿಸುತ್ತಿರುವ ಸಂಜಯ್ ದತ್ ಮತ್ತೆ ಹಿಂದಿನಂತೆ ಬಾಡಿ ಬಿಲ್ಡ್ ಮಾಡುತ್ತಿದ್ದಾರಂತೆ. ಕಟ್ಟುಮಸ್ತಾದ ದೇಹದೊಂದಿಗೆ ಖಡಕ್ ವಿಲನ್ ಅಧೀರನಾಗಿ ತೆರೆ ಮೇಲೆ ರಾಕಿ ಭಾಯ್ಗೆ ಟಕ್ಕರ್ ಕೊಡಲಿದ್ದಾರೆ ಬಾಲಿವುಡ್ ಖಳ ನಾಯಕ್ ಸಂಜಯ್ ದತ್. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಅನಂತ್ ನಾಗ್, ಪ್ರಕಾಶ್ ರೈ, ಮಾಳವೀಕಾ ಅವಿನಾಶ್ ಅವರ ತಾರಗಣವಿದೆ.
Comments are closed.