ಮನೋರಂಜನೆ

ತಂದೆ ಮರಣದ ನಂತರದ ಬಾಕಿ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಯೇ ಸ್ವೀಕರಿಸುತ್ತಿಲ್ಲ: ಎಸ್‌ಪಿ ಬಾಲಸುಬ್ರಮಣ್ಯಂ ಪುತ್ರ ಚರಣ್ ಸ್ಪಷ್ಟನೆ

Pinterest LinkedIn Tumblr


ಚೆನ್ನೈ: ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸಾವಿನ ನಂತರ ಬಾಕಿ ಬಿಲ್ ಪಾವತಿಸಲು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮುಂದಾಗಿದ್ದರು ಎಂಬ ವದಂತಿಗಳನ್ನು ಪುತ್ರ ಎಸ್‌ಪಿ ಚರಣ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಎಂಜಿಎಂ ಆಸ್ಪತ್ರೆಯ ವೈದ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಚರಣ್ ಅವರು, ನನ್ನ ತಂದೆಯ ಮರಣದ ನಂತರ, ಇನ್ನು ಎಷ್ಟು ಹಣ ಪಾವತಿಸಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿದ್ದೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಬಾಕಿ ಬಿಲ್ ಸ್ವೀಕರಿಸಲು ನಿರಾಕರಿಸಿದರು ಎಂದು ತಿಳಿಸಿದರು.

“ನನ್ನ ತಂದೆಯ ಸಾವಿನ ನಂತರ, ನಾವು ಬಾಕಿ ಹಣ ಪಾವತಿ ಬಗ್ಗೆ ಕೇಳಿದ್ದೇವೆ ಮತ್ತು ಹಣದೊಂದಿಗೆ ಪಾವತಿ ಮಾಡಲು ಹೋಗಿದ್ದೆವು. ಆದರೆ ಆಸ್ಪತ್ರೆಯ ಸಿಬ್ಬಂದಿ ನಮ್ಮಿಂದ ಹಣ ತೆಗೆದುಕೊಳ್ಳಬೇಡಿ ಎಂದು ತಮಗೆ ಮ್ಯಾನೇಜ್ಮೆಂಟ್ ಸೂಚಿಸಿರುವುದಾಗಿ” ಹೇಳಿದರು ಎಂದರು.

ಎಸ್ ಪಿಬಿಯವರು ಎಂಜಿಎಂ ಆಸ್ಪತ್ರೆಯಲ್ಲಿ 51 ದಿನಗಳ ಕಾಲ ಪಡೆದಿದ್ದ ಚಿಕಿತ್ಸೆಗೆ 3 ಕೋಟಿಗೂ ಹೆಚ್ಚು ಚಿಕಿತ್ಸಾ ವೆಚ್ಚ ಭರಿಸಬೇಕಿದ್ದು, ಇದರಲ್ಲಿ 1.85 ಕೋಟಿಯಷ್ಟು ಹಣವನ್ನು ಮಾತ್ರ ಎಸ್ ಪಿ ಚರಣ್ ಆಸ್ಪತ್ರೆಗೆ ಪಾವತಿ ಮಾಡಿದ್ದಾರೆ. ಉಳಿದ ಹಣಕ್ಕಾಗಿ ಸಹಾಯ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಕುಟುಂಬ ಮನವಿ ಮಾಡಿತ್ತು. ತಮಿಳುನಾಡು ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಅಂತಿಮವಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹಾಯ ಹಸ್ತ ಚಾಚಿದರು ಎಂಬ ವದಂತಿಗಳನ್ನು ಹಬ್ಬಿಸಲಾಗಿತ್ತು.

Comments are closed.