
ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಸುಶಾಂತ್ ಜೊತೆ ಆಪ್ತವಾಗಿದ್ದ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸುಶಾಂತ್‌ರ ಮನೆಕೆಲಸದವರಾಗಿದ್ದ ನೀರಜ್, ಕೇಶವ್, ದೀಪೇಶ್ ಸಾವಂತ್ ಮತ್ತು ಸ್ನೇಹಿತ ಸಿದ್ಧಾರ್ಥ್ ಪಿಟಾನಿಗೆ ಅನೇಕ ಪ್ರಶ್ನೆ ಕೇಳಲಾಗಿದೆ. ಈ ವೇಳೆ ಹಲವು ಸತ್ಯಗಳನ್ನು ಅವರು ಬಾಯಿ ಬಿಟ್ಟಿದ್ದಾರೆ.
ಸಾಯುವ ಹಿಂದಿನ ರಾತ್ರಿ ಊಟ ಮಾಡಲಿಲ್ಲ!
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವುದುಕ್ಕೂ ಒಂದು ದಿನ ಮುಂದೆ, ಅಂದರೆ ಜೂ.13ರ ರಾತ್ರಿ ಮನೆಯಲ್ಲಿ ಯಾವ ರೀತಿ ವಾತಾವರಣ ಇತ್ತು ಎಂಬುದನ್ನು ವಿವರಿಸಿದ್ದಾರೆ. ದೀಪೇಶ್ ಸಾವಂತ್ ಹೇಳುವ ಪ್ರಕಾರ, ಅಂದು ರಾತ್ರಿಯಿಂದ ಮರುದಿನ ಬೆಳಗ್ಗೆವರೆಗೂ ಸುಶಾಂತ್ ತಮ್ಮ ರೂಮ್‌ನಲ್ಲೇ ಇದ್ದರು. ರಾತ್ರಿ ಊಟ ಕೊಡಲು ಹೋದರೆ ಬೇಡ ಎಂದರು. ಮಾವಿನ ಹಣ್ಣಿನ ಜ್ಯೂಸ್ ಕೇಳಿದರು. ‘ನೀವೆಲ್ಲ ಊಟ ಮಾಡಿ’ ಎಂದು ಮನೆಕೆಲಸದವರಿಗೆ ಸೂಚಿಸಿದರು. ರೂಮ್‌ನಲ್ಲಿ ಇದ್ದ ಸುಶಾಂತ್‌ಗೆ ರಾತ್ರಿ 10.30ರ ಸುಮಾರಿಗೆ ದೀಪೇಶ್ ಫೋನ್ ಮಾಡಿದರು. ಆದರೆ ಅವರು ಸ್ವೀಕರಿಸಲಿಲ್ಲ.
ಕೊನೇ ಬಾರಿ ಕಾಣಿಸಿಕೊಂಡಿದ್ದು 9.15ಕ್ಕೆ
ದೀಪೇಶ್ ಮರುದಿನ ಬೆಳಗ್ಗೆ 5.30ಕ್ಕೆ ಎದ್ದು ಸುಶಾಂತ್‌ರ ರೂಮ್‌ಗೆ ಹೋಗಿ ನೋಡಿದಾಗ ಅವರು ಅದಾಗಲೇ ಎದ್ದಿದ್ದರು. ಆದರೆ ಟೀ ಅಥವಾ ತಿಂಡಿ ಕೊಡಲು ಹೋದರೆ ಏನನ್ನೂ ಸ್ವೀಕರಿಸಲಿಲ್ಲ. ಬೆಳಗ್ಗೆ 7 ಗಂಟೆಗೆ ಕೇಶವ್ ಮತ್ತು ನೀರಜ್‌ಗೆ ಎಚ್ಚರವಾಯ್ತು. 8.15ರ ಸುಮಾರಿಗೆ ತಣ್ಣೀರು ಬೇಕು ಎಂದು ಸುಶಾಂತ್ ಕೇಳಿದರು. ನಂತರ 9.15ರ ಹೊತ್ತಿಗೆ ಅವರಿಗೆ ದಾಳಿಂಬೆ ಜ್ಯೂಸ್ ಮತ್ತು ಎಳನೀರನ್ನು ಕೇಶವ್ ನೀಡಿದರು. ಅದೇ ಕೊನೇ ಬಾರಿಗೆ ಸುಶಾಂತ್‌ರನ್ನು ಅವರು ನೋಡಿದ್ದು!
ಅಚ್ಚರಿ ಮೂಡಿಸಿದ ರೂಮ್ ಲಾಕ್!
ಮಧ್ಯಾಹ್ನಕ್ಕೆ ಏನು ಅಡುಗೆ ಮಾಡಲಿ ಎಂದು ಕೇಳಲು ಸುಶಾಂತ್‌ರ ರೂಮ್ ಬಳಿ ಕೇಶವ್ ಹೋದಾಗ ಅವರ ರೂಮ್ ಲಾಕ್ ಆಗಿತ್ತು. ಸಾಮಾನ್ಯವಾಗಿ ಸುಶಾಂತ್ ಯಾವಾಗಲೂ ಹೀಗೆ ಬಾಗಿಲು ಹಾಕಿಕೊಳ್ಳುತ್ತಿರಲಿಲ್ಲ. ಹಾಗಾಗಿ ಮನೆಯಲ್ಲಿ ಇದ್ದ ಎಲ್ಲರಿಗೂ ಅದು ಅಚ್ಚರಿ ಎನಿಸಿತು. ಮತ್ತೆ ಮಲಗಿರಬಹುದು ಎಂದು ಅವರೆಲ್ಲ ಊಹಿಸಿದರು. ಕೆಲವೇ ನಿಮಿಷಗಳ ಬಳಿಕ ಮತ್ತೆ ಬಾಗಿಲು ಬಡಿದರು. ಆಗಲೂ ಸುಶಾಂತ್‌ರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ಸುಶಾಂತ್‌ರ ಅಕ್ಕ ಮೀತು ಸಿಂಗ್‌ಗೆ ವಿಷಯ ಮುಟ್ಟಿಸಲಾಯಿತು.
ಬಾಗಿಲು ತೆರೆಯುವ ಪ್ರಯತ್ನ
ರೂಮಿನ ಇನ್ನೊಂದು ಕೀಗಾಗಿ ಎಲ್ಲರೂ ಹುಡುಕಾಡಿದರು. ಸುಶಾಂತ್‌ರ ಮ್ಯಾನೇಜರ್ ಸ್ಯಾಮ್ಯುಯಲ್ ಮಿರಾಂಡಗೆ ಕರೆ ಮಾಡಿ ಕೇಳಿದರೆ, ಅವರ ಬಳಿಯೂ ಇನ್ನೊಂದು ಕೀ ಇರಲಿಲ್ಲ. ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಸಿಬ್ಬಂದಿಗೆ ಕೇಳಿದರೂ ಪ್ರಯೋಜನ ಆಗಲಿಲ್ಲ. ನಂತರ ಕೀ ರಿಪೇರಿ ಮಾಡುವವನನ್ನು ಕರೆಸಲಾಯಿತು. ಆದರೆ ಇದು ಸುಶಾಂತ್‌ರ ಮನೆ ಎಂಬುದನ್ನು ಆತನಿಗೆ ತಿಳಿಸಲಿಲ್ಲ. ಆತ ಲಾಕ್ ಮುರಿದು ಬಾಗಿಲು ಓಪನ್ ಮಾಡಿದಾಗ ಒಳಗೆ ಲೈಟ್ ಆಫ್ ಆಗಿದ್ದವು. ಕೂಡಲೇ ಅವನನ್ನು ಹೊರಗೆ ಕಳಿಸಲಾಯಿತು. ದೀಪೇಶ್ ಮತ್ತು ಸಿದ್ಧಾರ್ಥ್ ರೂಮ್‌ನ ಒಳಗೆ ಹೋದರು.
ಸುಶಾಂತ್ ಶವವಾಗಿದ್ದರು!
ದೀಪೇಶ್ ಮತ್ತು ಸಿದ್ಧಾರ್ಥ್ ರೂಮ್‌ನ ಒಳಗೆ ಹೋದಾಗ ನೀರಜ್ ಮತ್ತು ಕೇಶವ್ ಹೊರಗೆ ಇದ್ದರು. ರೂಮ್‌ನ ಲೈಟ್ ಹಾಕಿ ನೋಡಿದಾಗ ಎಲ್ಲರೂ ಶಾಕ್ ಆದರು. ಸುಶಾಂತ್ ನೇಣು ಹಾಕಿಕೊಂಡಿದ್ದರು. ಮೀತು ಸಿಂಗ್‌ಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. ಆಂಬ್ಯುಲೆನ್ಸ್‌ಗಾಗಿ ಸಿದ್ಧಾರ್ಥ್ 108ಕ್ಕೆ ಕರೆ ಮಾಡಿದರು. ಸುಶಾಂತ್ ಸಹೋದರಿಯ ಗಂಡನ ಸೂಚನೆಯಂತೆ ಶವವನ್ನು ಕೆಳಗೆ ಇಳಿಸಿ, ಅವರು ಉಸಿರಾಡುತ್ತಿದ್ದಾರಾ ಇಲ್ಲವಾ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಅಷ್ಟರಲ್ಲೇ ಪೊಲೀಸರು ಆಗಮಿಸಿದರು ಎಂದು ಈ ನಾಲ್ಕು ಜನರು ಸಿಬಿಐ ಆಧಿಕಾರಿಗಳಿಗೆ ಉತ್ತರಿಸಿದ್ದಾರೆ ಎಂದು ವರದಿ ಆಗಿದೆ.
Comments are closed.