ಮನೋರಂಜನೆ

‘ಕರಾವಳಿ ಬೆಡಗಿ’ ಅನುಷ್ಕಾ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಖಚಿತ!

Pinterest LinkedIn Tumblr


ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹುಟ್ಟಿದ್ದು, ಬೆಳೆದದ್ದು ಎಲ್ಲವು ಕರ್ನಾಟಕದಲ್ಲೇ. ಆದರೆ, ಅಪ್ಪಟ ಕನ್ನಡತಿಯಾಗಿರುವ ಅವರು, ಮಿಂಚಿದ್ದು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ. ಈಗಲೂ ಅವರಿಗೆ ಅಲ್ಲಿ ನಂಬರ್ 1 ಪಟ್ಟ ಇದೆ. ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಅವರ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ, ಮೊದಲಿನಿಂದಲೂ ಕರ್ನಾಟಕದ ಅವರ ಫ್ಯಾನ್ಸ್‌ಗೆ ಇದ್ದಿದ್ದು ಒಂದೇ ಕೊರಗು, ‘ಅವರು ಕನ್ನಡದಲ್ಲಿ ನಟಿಸುವುದು ಯಾವಾಗ..?’ ಅಂತ! ಸದ್ಯಕ್ಕೆ ಆ ಕುರಿತು ಒಂದು ಗುಡ್‌ ನ್ಯೂಸ್ ಸಿಕ್ಕಿದೆ.

ಸದ್ಯದಲ್ಲೇ ಸ್ಯಾಂಡಲ್‌ವುಡ್‌ಗೆ ಅನುಷ್ಕಾ ಶೆಟ್ಟಿ ಎಂಟ್ರಿ
ಅನುಷ್ಕಾ ಶೆಟ್ಟಿ ಚಂದನವನಕ್ಕೆ ಎಂಟ್ರಿ ನೀಡೋದು ಖಚಿತವಾಗಿದೆ. ಅದನ್ನು ಅವರೇ ತಿಳಿಸಿದ್ದಾರೆ. ‘ಹಾಗಾದರೆ, ಕನ್ನಡದಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರಾ ಅನುಷ್ಕಾ’ ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗೇನು ಇಲ್ಲ. ಅನುಷ್ಕಾ ನಟನೆಯ ಬಹುನಿರೀಕ್ಷಿತ ‘ನಿಶ್ಯಬ್ಧಂ’ ಸಿನಿಮಾವು ಬಹುಭಾಷೆಗಳಲ್ಲಿ ನಿರ್ಮಾಣವಾಗಿದೆ. ಇದೀಗ ಆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರಲಿದೆ. ಸದ್ಯ ಅದರ ಕನ್ನಡ ವರ್ಷನ್‌ನ ಒಂದು ಹಾಡು ರಿಲೀಸ್ ಆಗಿದ್ದು, ಆ ಕುರಿತು ಅನುಷ್ಕಾ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕನ್ನಡದಲ್ಲೇ ಪೋಸ್ಟ್ ಹಾಕಿದ ಅನುಷ್ಕಾ
‘ನಿಶ್ಯಬ್ಧಂ’ ಸಿನಿಮಾದ ಕನ್ನಡ ವರ್ಷನ್‌ ಹಾಡಿನ ಲಿಂಕ್‌ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿರುವ ಅನುಷ್ಕಾ ಶೆಟ್ಟಿ, ಕನ್ನಡದಲ್ಲೇ ಮಾಹಿತಿ ನೀಡಿದ್ದಾರೆ. ‘ನಿನ್ನೆ ನಿನ್ನೆ ಕಣ್ಣಿನಲ್ಲಿ ತುಂಬಿಕೊಂಡೇ..’ ನನ್ನ ಮೊದಲ ಕನ್ನಡ ಲಿರಿಕಲ್ ವಿಡಿಯೋ ನಿಮಗಾಗಿ ಇಲ್ಲಿದೆ..’ ಎಂದು ಬರೆದುಕೊಂಡಿದ್ದಾರೆ ಅನುಷ್ಕಾ. ಈ ಪೋಸ್ಟ್‌ ನೋಡುತ್ತಿದ್ದಂತೆಯೇ, ಕರ್ನಾಟಕದ ಅಭಿಮಾನಿಗಳು ಖುಷಿಯಾಗಿದ್ದಾರೆ. ‘ಅನುಷ್ಕಾ ನಮ್ಮ ಕನ್ನಡದ ಹೆಮ್ಮೆ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಈಗ ಬೇರೆ ಭಾಷೆಲಿ ನಟನೆ ಮಾಡ್ತಿರೋ ನಟಿಯರು ಅನುಷ್ಕಾರನ್ನು ನೋಡಿ ಕಲಿಯಲಿ..’, ‘ಅವರಿಗೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ ಇರೋ ಪ್ರೀತಿ.. ಒಲವು ಅದ್ಭುತ. ಚಿತ್ರದ ಕನ್ನಡ ಹಾಡನ್ನು ಕನ್ನಡದ ಅವತರಣಿಕೆಯಲ್ಲಿಯೇ ಬಿಡುಗಡೆ ಮಾಡಿದ್ದು, ತುಂಬಾ ಸಂತೋಷವಾಗಿದೆ. ನಿಮ್ಮ ಈ ತಾಯ್ನುಡಿ ಭಾಷಾ ಪ್ರೇಮ ಹೀಗೆ ಇರಲಿ’ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ ಅಭಿಮಾನಿಗಳು.

ಬಹುಭಾಷೆಯಲ್ಲಿ ನಿಶ್ಯಬ್ಧಂ
ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರಲಿರುವ ಈ ಚಿತ್ರವು ಕನ್ನಡದಲ್ಲಿ ಮಾತ್ರ ‘ಅನುಷ್ಕಾಸ್‌ ನಿಶ್ಯಬ್ಧ’ ಹೆಸರಿನಲ್ಲಿ ತೆರೆಕಾಣಲಿದೆ. ಹೇಮಂತ್ ಮಧುಕರ್ ನಿರ್ದೇಶನದ ಈ ಸಿನಿಮಾದಲ್ಲಿ
ಮಾಧವನ್‌, ಸುಬ್ಬರಾಜು, ಅಂಜಲಿ ಮುಂತಾದವರು ನಟಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಕೊರೊನಾದಿಂದಾಗಿ ಅಂದುಕೊಂಡಂತೆ ಯಾವುದೂ ಆಗಿಲ್ಲ. ಸಣ್ಣ ಗ್ಯಾಪ್‌ನ ಬಳಿಕ ಅನುಷ್ಕಾ ಈ ಸಿನಿಮಾದಲ್ಲಿ ನಟಿಸಿದ್ದು, ಓಟಿಟಿಯಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.

Comments are closed.