ಮನೋರಂಜನೆ

ಸುಶಾಂತ್ ಸಿಂಗ್ ಸಾವು: ಸುಪ್ರೀಂನಲ್ಲಿ ರಿಯಾ, ಬಿಹಾರ ಸರ್ಕಾರ ಲಿಖಿತ ಹೇಳಿಕೆ

Pinterest LinkedIn Tumblr


ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಬಿಹಾರದ ಪಾಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಮನವಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ನಟಿ ರಿಯಾ ಚಕ್ರವರ್ತಿ ಮತ್ತು ಬಿಹಾರ ಸರ್ಕಾರ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ್ದಾರೆ.

ರಿಯಾ ಚಕ್ರವರ್ತಿ ಅವರ ಮನವಿಯನ್ನು ತಿರಸ್ಕರಿಸಬೇಕೆಂದು ಸುಪ್ರೀಂ ಕೋರ್ಟ್ ನ್ನು ಇಂದು ಕೋರಿದ ಬಿಹಾರ ಸರ್ಕಾರ, ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ಮತ್ತು ಪೂರ್ಣಗೊಳಿಸಲು ಸಿಬಿಐಗೆ ಯಾವುದೂ ಅಡ್ಡವಾಗುವುದಿಲ್ಲ ಎಂದು ಹೇಳಿದೆ.

ತಮ್ಮ ಕಾನೂನು ವ್ಯಾಪ್ತಿಗೆ ಬರದೆ ಬಿಹಾರ ಸರ್ಕಾರದ ಪರವಾಗಿ ಸಿಬಿಐ ತನಿಖೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಇನ್ನೊಂದೆಡೆ ರಿಯಾ ಚಕ್ರವರ್ತಿ ಲಿಖಿತ ಹೇಳಿಕೆಯನ್ನು ಇಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದಾರೆ.

ಮೊನ್ನೆ ಆಗಸ್ಟ್ 11ರಂದು ರಿಯಾ ಚಕ್ರವರ್ತಿ ಸಲ್ಲಿಸಿದ್ದ ಮನವಿಯನ್ನು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ಇಂದಿನೊಳಗೆ ಸಂಬಂಧಪಟ್ಟವರು ಅರ್ಜಿ ಸಲ್ಲಿಸುವಂತೆ ಆದೇಶ ನೀಡಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದಾರೆ. ಸುಶಾಂತ್ ಸಿಂಗ್ ತಂದೆ ಕೃಷ್ಣ ಕಿಶೋರ್ ಸಿಂಗ್ ಪಾಟ್ನಾ ನ್ಯಾಯಾಲಯದಲ್ಲಿ ರಿಯಾ ಚಕ್ರವರ್ತಿ ಮತ್ತು ಇತರ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿ ತಮ್ಮ ಮಗನ ಸಾವಿಗೆ ಪ್ರೇರೇಪಣೆ ನೀಡಿದ್ದರು ಎಂದು ಆರೋಪಿಸಿದ್ದರು.

Comments are closed.