ಮನೋರಂಜನೆ

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಕೊರೊನಾ ಪಾಸಿಟಿವ್ ! ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು…

Pinterest LinkedIn Tumblr

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈಗಾಗಲೇ ಭಾರತದಲ್ಲಿ 18 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ಇರುವುದು ದೃಢವಾಗಿದೆ. ಈ ಮಧ್ಯೆ ಭಾರತೀಯ ಚಿತ್ರರಂಗದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ. ಬುಧವಾರ (ಆ.5) ಈ ವಿಚಾರವನ್ನು ವಿಡಿಯೋ ಮೂಲಕ ಎಸ್‌ಪಿಬಿ ತಿಳಿಸಿದ್ದಾರೆ. ಸದ್ಯ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ‘ಕಳೆದ ಎರಡ್ಮೂರು ದಿನಗಳಿಂದ ಸ್ವಲ್ಪ ದೇಹದಲ್ಲಿ ಅಸ್ವಸ್ಥತೆ ಇತ್ತು. ಜೊತೆಗೆ ಶೀತ ಮತ್ತು ಜ್ವರ ಕೂಡ ಇತ್ತು. ಇದನ್ನು ನಿರ್ಲಕ್ಷ್ಯ ಮಾಡುವಂತೆ ಇರಲಿಲ್ಲ. ಹಾಗಾಗಿ, ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಂಡೆ. ಕೊರೊನಾ ಪಾಸಿಟಿವ್‌ನ ಸಣ್ಣ ಪ್ರಮಾಣದ ಲಕ್ಷಣಗಳಿದ್ದವು. ಅವರು ಮನೆಯಲ್ಲೇ ಇದ್ದು, ವೈದ್ಯರು ಸೂಚಿಸಿದ ಔಷಧಿಗಳನ್ನು ಪಡೆದುಕೊಂಡರೆ ಸಾಕು ಎಂದರು. ಆದರೆ, ನನ್ನ ಕುಟುಂಬದ ಮೇಲಿನ ಕಾಳಜಿಯಿಂದ ನಾನು ಹಾಗೇ ಮಾಡಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದಿದ್ದಾರೆ.

‘ಇಲ್ಲೆಲ್ಲ ನನ್ನ ಒಳ್ಳೆಯ ಸ್ನೇಹಿತರೇ ಇದ್ದಾರೆ. ನನ್ನ ಆರೋಗ್ಯ ಉತ್ತಮವಾಗಿದೆ. ನನ್ನ ಬಗ್ಗೆ ಯಾವುದೇ ಆತಂಕ ಪಡಬೇಡಿ. ನನಗೆ ಕರೆಮಾಡಬೇಡಿ. ನಾನು ಹೇಗಿದ್ದೇನೆ ಎಂದು ಚಿಂತಿಸಬೇಡಿ. ಶೀತವೊಂದು ಬಿಟ್ಟರೆ, ನಾನು ಉತ್ತಮವಾಗಿಯೇ ಇದ್ದೇನೆ. ಜ್ವರ ಕೂಡ ಕಡಿಮೆ ಆಗಿದೆ. ಇನ್ನು ಎರಡು ದಿನಗಳಲ್ಲಿ ನಾನು ಸಂಪೂರ್ಣ ಗುಣವಾಗಲಿದ್ದೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಪ್ರತಿಯೊಬ್ಬರ ಕರೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನಾನಿಲ್ಲಿಗೆ ಬಹುಶಃ ವಿಶ್ರಾಂತಿಗಾಗಿ ಬಂದಿದ್ದೇನೆ. ನಾನು ಚೆನ್ನಾಗಿದ್ದೇನೆ. ಚೆನ್ನಾಗಿರುತ್ತೇನೆ’ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಅನೇಕರು ಶುಭ ಹಾರೈಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಬಹುಭಾಷಾ ಗಾಯಕರಾದ ಗಾನ ಗಂಧರ್ವ ಶ್ರೀ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಮದ್ರಾಸಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ತಮ್ಮ ಆರೋಗ್ಯದ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಸ್ವತಃ ತಿಳಿಸಿರುವ ನಮ್ಮೆಲ್ಲರ ಪ್ರೀತಿಯ ಗಾಯಕ, ಶ್ರೀಯುತ ಎಸ್‌ಪಿಬಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

Comments are closed.