ಮನೋರಂಜನೆ

ಕೊರೊನಾದಿಂದ ಗುಣವಾದರೂ ಅಮಿತಾಭ್‌ಗೆ ತಪ್ಪದ ಕಿರಿಕಿರಿ!

Pinterest LinkedIn Tumblr


ಇಡೀ ದೇಶವೇ ಕೊರೊನಾ ವೈರಸ್‌ ಕಾಟಕ್ಕೆ ಸುಸ್ತಾಗಿದೆ. ಬಾಲಿವುಡ್‌ನ ದಿಗ್ಗಜ ನಟ ಅಮಿತಾಭ್‌ ಬಚ್ಚನ್‌ ಕೂಡ ಕೊರೊನಾ ಸೋಂಕಿಗೆ ಒಳಗಾಗಿ ಜು.11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಜೊತೆ ಕುಟುಂಬದ ಇತರೆ ಸದಸ್ಯರಿಗೂ ಪಾಸಿಟಿವ್‌ ವರದಿ ಬಂದಿತ್ತು. ಒಟ್ಟು 23 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡ ಬಳಿಕ ಬಿಗ್‌ ಬಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅದರ ಬೆನ್ನಲ್ಲೇ ಕೆಲವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ಅಮಿತಾಭ್‌ ಮಾಡಿದ್ದಾದರೂ ಏನು? ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದರು. ಅವರು ಮಾತ್ರವಲ್ಲದೆ, ಸೊಸೆ ಐಶ್ವರ್ಯಾ ರೈ ಹಾಗೂ ಮೊಮ್ಮಗಳು ಆರಾಧ್ಯ ಕೂಡ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಹಾಗಾಗಿ ನಾನಾವತಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಸೋಶಿಯಲ್‌ ಮೀಡಿಯಾ ಮೂಲಕ ಅಮಿತಾಭ್‌ ಮೆಚ್ಚುಗೆ ಸೂಚಿಸಿದ್ದಾರೆ. ಅದನ್ನು ಕಂಡ ಮಹಿಳೆಯೊಬ್ಬರು ಗರಂ ಆಗಿದ್ದಾರೆ!

ಅಮಿತಾಭ್‌ ಮಾಡಿದ ಫೇಸ್‌ಬುಕ್‌ ಪೋಸ್ಟ್‌ಗೆ ಜಾನ್ವಿ ಮಖಿಜಾ ಎಂಬ ಮಹಿಳೆ ಕಾಮೆಂಟ್‌ ಮಾಡಿದ್ದಾರೆ. ‘ನಾನಾವತಿ ಆಸ್ಪತ್ರೆಯಲ್ಲಿ ನನ್ನ ತಂದೆಗೆ ತಪ್ಪಾಗಿ ಕೊರೊನಾ ಪಾಸಿಟಿವ್‌ ವರದಿ ನೀಡಲಾಯಿತು. ಅವರು ಡಿಸ್‌ಚಾರ್ಜ್‌ ಆದ ಬಳಿಕ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆ್ಯಂಟಿಬಾಡೀಸ್‌ ಟೆಸ್ಟ್‌ ಮಾಡಿಸಿದೆವು. ಅವರಿಗೆ ಕೋವಿಡ್‌ ಇರಲೇ ಇಲ್ಲ ಎಂಬುದು ಅದರಲ್ಲಿ ಸಾಬೀತಾಯಿತು. 80 ವರ್ಷ ವಯಸ್ಸಿನ ಅವರನ್ನು ನಾನಾವತಿ ಆಸ್ಪತ್ರೆಯವರು ಕೋವಿಡ್‌ ವಾರ್ಡ್‌ನಲ್ಲಿ ಇರಿಸಿದ್ದರು’ ಎಂದು ಆ ಮಹಿಳೆ ಆರೋಪ ಮಾಡಿದ್ದಾರೆ.

‘ಅಮಿತಾಭ್‌ ಅವರೇ.. ಇಂಥ ಆಸ್ಪತ್ರೆ ಬಗ್ಗೆ ನೀವು ಪ್ರಚಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅವರಿಗೆ ಜನರ ಜೀವಕ್ಕಿಂತ ದುಡ್ಡೇ ಮುಖ್ಯ. ಕ್ಷಮಿಸಿ… ಆದರೆ ನಿಮ್ಮ ಮೇಲಿದ್ದ ಸಂಪೂರ್ಣ ಗೌರವ ಕಳೆದ ಹೋಯ್ತು’ ಎಂದು ಖಾರವಾಗಿಯೇ ಆ ಮಹಿಳೆ ಕಾಮೆಂಟ್‌ ಮಾಡಿದ್ದಾರೆ. ಅದಕ್ಕೆ ಅಷ್ಟೇ ಬುದ್ಧಿವಂತಿಕೆಯಿಂದ ಅಮಿತಾಭ್‌ ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮ ತಂದೆಗೆ ಹೀಗೆ ಆಗಿದ್ದರ ಬಗ್ಗೆ ನಾನೂ ಬೇಸರ ವ್ಯಕ್ತಪಡಿಸುತ್ತೇನೆ. ಆದರೆ ನನ್ನ ತಿಳಿವಳಿಕೆ ಪ್ರಕಾರ ಯಾವುದೇ ಆಸ್ಪತ್ರೆಯೂ ಬೇಕಂತಲೇ ಹೀಗೆಲ್ಲ ಮಾಡುವುದಿಲ್ಲ. ನಾನು ಯಾವ ಆಸ್ಪತ್ರೆಯ ಬಗ್ಗೆಯೂ ಪ್ರಚಾರ ಮಾಡುತ್ತಿಲ್ಲ. ನನಗೆ ಅವರು ನೀಡಿದ ಚಿಕಿತ್ಸೆ ಮತ್ತು ತೋರಿದ ಕಾಳಜಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ ಅಷ್ಟೇ. ಈ ಹಿಂದೆಯೂ ನನಗೆ ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ಇದೇ ರೀತಿ ಧನ್ಯವಾದ ತಿಳಿಸಿದ್ದೆ. ನೀವು ನನ್ನ ಮೇಲಿನ ಗೌರವ ಕಳೆದುಕೊಂಡಿರಬಹುದು. ಆದರೆ ನಾನು ಈ ದೇಶದ ವೈದ್ಯರ ಬಗ್ಗೆ ಎಂದಿಗೂ ಅಗೌರವ ತೋರುವುದಿಲ್ಲ’ ಎಂದು ಅಮಿತಾಭ್‌ ಉತ್ತರಿಸಿದ್ದಾರೆ.

Comments are closed.