ಮನೋರಂಜನೆ

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ: ದೂರು ದಾಖಲಾದ ಬಳಿಕ ಪ್ರಥಮ ಬಾರಿ ಪ್ರತಿಕ್ರಿಯೆ ನೀಡಿದ ರಿಯಾ ಚಕ್ರವರ್ತಿ

Pinterest LinkedIn Tumblr


ಸುಶಾಂತ್​ ಸಿಂಗ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ತಂದೆ ಕೆ.ಕೆ ಸಿಂಗ್​ ಅವರು, ರಿಯಾ ವಿರುದ್ಧ ಪಾಟ್ನಾದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ರಿಯಾ ವಿರುದ್ಧ ಎಫ್​ಐಆರ್​ ಸಹ ಮಾಡಲಾಗಿದೆ.

ಎಫ್​ಐಆರ್​ ದಾಖಲಾದ ನಂತರ ರಿಯಾ ಎಲ್ಲೂ ಈ ಬಗ್ಗೆ ಮಾತನಾಡಿರಲಿಲ್ಲ. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಪಾಟ್ನಾ ಪೊಲೀಸರು ಮುಂಬೈನಲ್ಲಿರುವ ರಿಯಾ ಅವರ ನಿವಾಸಕ್ಕೆ ಹೋಗಿದ್ದರು. ಆದರೆ ರಿಯಾ ಅಲ್ಲಿ ಅವರಿಗೆ ಸಿಗಲೇ ಇಲ್ಲವಂತೆ. ಎಫ್​ಐಆರ್ ದಾಖಲಾಗುತ್ತಿದ್ದಂತೆಯೇ ರಿಯಾ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ರಿಯಾ, ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಎಫ್​ಐಆರ್​ ದಾಖಲಾದ ನಂತರ ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ರಿಯಾ ಒಂದು ವಿಡಿಯೋ ಮಾಡಿದ್ದು, ಅದರಲ್ಲಿ ತನಗೆ ದೇವರು ಹಾಗೂ ಈ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನನಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ. ಸತ್ಯಮೇವ ಜಯತೆ ಎಂದು ಹೇಳಿದ್ದಾರೆ.

ಸುಶಾಂತ್​ ಅಗಲಿ ಒಂದೂವರೆ ತಿಂಗಳು ಕಳೆದ ನಂತರ ಅವರ ತಂದೆ ಪಾಟ್ನಾದ ರಾಜೀವ್​ ನಗರದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಸುಶಾಂತ್​ ಅವರ ವೈದ್ಯಕೀಯ ದಾಖಲೆಗಳನ್ನು ಕಳವು ಮಾಡಿದ, ಬೆದರಿಕೆ ಹಾಕುವುದರ ಜೊತೆಗೆ ಹಲವಾರು ಗಂಭೀರ ಆರೋಪಗಳನ್ನು ರಿಯಾ ವಿರುದ್ಧ ಮಾಡಿದ್ದಾರೆ.

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಪೊಲೀಸರು ರಿಯಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಎಫ್​ಐಆರ್​ ವಿಷಯ ತಿಳಿಯುತ್ತಿದ್ದಂತೆಯೇ ರಿಯಾ ಅವರನ್ನು ಟ್ರೋಲಿಗರು ಮತ್ತೆ ಟ್ರೋಲ್​ ಮಾಡಲಾರಂಭಿಸಿದ್ದರು. ಇದರಿಂದಾಗಿ ರಿಯಾ ತಮ್ಮ ಪೋಸ್ಟ್​ಗಳಿಗೆ ಕಮೆಂಟ್ ಮಾಡಲಾಗದಂತೆ ಸೆಟ್ಟಿಂಗ್​ ಬದಲಾಯಿಸಿದ್ದರು.

Comments are closed.