ಬಾಲಿವುಡ್ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಖ್ಯಾತನಾಮರನ್ನು ಗುರಿಯಾಗಿಸಿಕೊಂಡು ಕೆಲವು ಕಿಡಿಗೇಡಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ಇದೀಗ ನಟಿ ಆಲಿಯಾ ಭಟ್ ಸಹೋದರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಶಹೀನ್ ಭಟ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆದರಿಕೆಯ ಸಂದೇಶ ಕಳುಹಿಸಿದ ಕಿಡಿಗೇಡಿಗಳ ಕುರಿತಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತ (ನೆಪೊಟಿಸಂ) ತಾಂಡವವಾಡುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಮಹೇಶ್ ಭಟ್ ಅವರ ಕುಟುಂಬ ಕೂಡ ನೆಪೊಟಿಸಂನಲ್ಲಿ ತೊಡಗಿಸಿಕೊಂಡಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಅದೇ ವಿಚಾರಕ್ಕಾಗಿ ಕೆಲವು ನೆಟ್ಟಿಗರು ಆಲಿಯಾ ಭಟ್ ಸಹೋದರಿ ಶಹೀನ್ ಭಟ್ಗೆ ಬೆದರಿಗೆ ಮೆಸೇಜ್ ಮಾಡಿದ್ದಾರೆ.
ನೆಟ್ಟಿಗರು ಮಾಡಿರುವ ಬೆದರಿಕೆಯ ಮೆಸೇಜ್ ಅನ್ನು ಶಹೀನ್ ಭಟ್ ಸ್ಕ್ರೀನ್ಶಾಟ್ ತೆಗೆದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ‘ಇದು ನಿಮಗೆ ಅಚ್ಚರಿ ಎನಿಸಿತಾ? ಯಾಕೆ? ನನಗಂತೂ ಅಚ್ಚರಿ ಎನಿಸಿಲ್ಲ ಎಂದು ಬರೆದುಕೊಂಡಿದ್ದಾರೆ. ಇಂತಹ ಮೆಸೇಜ್ ಕಳುಹಿಸಿದ ಕಿಡಿಗೇಡಿಗಳ ವಿರುದ್ದ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಶಹೀನ್ ಭಟ್ ಕಿಡಿಗೇಡಿಗಳ ಸಾಮಾಜಿಕ ಖಾತೆಯನ್ನು ಬ್ಲಾಕ್ ಮಾಡುವುದರ ಜೊತೆಗೆ ರಿಪೋರ್ಟ್ ಕೂಡ ಮಾಡಿದ್ದಾರೆ. ನಿಮ್ಮ ಗುರುತನ್ನು ನಾನು ಮುಚ್ಚಿಡುವುದಿಲ್ಲ. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಎಲ್ಲೋ ಕುಳಿತಿರುವ ನಿಮ್ಮನ್ನು ಪತ್ತೆ ಹಚ್ಚುವುದು ಕಷ್ಟ ಎಂದು ನೀವು ಭಾವಿಸಿರಬಹುದು. ಆದರೆ ಐಪಿ ವಿಳಾಸದಿಂದ ನಿಮ್ಮನ್ನು ಸುಲಭವಾಗಿ ಪತ್ತೆಹಚ್ಚಬಹುದು. ನೀವು ಕಣ್ಣಿಗೆ ಕಾಣದವರಂತೂ ಅಲ್ಲ. ಈ ರೀತಿ ಬೆದರಿಗೆ ಹಾಕುವುದು ಅಪರಾಧ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಸಂದೇಶಗಳು ಹೆಚ್ಚಾಗುತ್ತಲೇ ಇದೆ. ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್, ಆಲಿಯಾ ಭಟ್, ಕೆಲವು ನಿರ್ದೇಶಕರು ನೆಪೊಟಿಸಂ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ಕೆಲವು ಟ್ರೋಲ್ ಪೇಜ್ಗಳು ಇವರ ಫೋಟೋವನ್ನು ಇಟ್ಟುಕೊಂಡು ಟ್ರೋಲ್ ಮಾಡಿದ್ದವು. ಇದೀಗ ಮಹೇಶ್ ಭಟ್ ಫ್ಯಾಮಿಲಿಗೆ ಕೆಲವು ಕಿಡಿಗೇಡಿಗಳು ಬೆದರಿಗೆ ಹಾಕುತ್ತಿದ್ದಾರೆ. ಹಾಗಾಗಿ ಆಲಿಯಾ ಭಟ್, ಅವರ ತಾಯಿ ಸೋನಿ ರಾಝ್ದಾನ್ ಮುಂತಾದವರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ.
Comments are closed.