ಮನೋರಂಜನೆ

ಗರ್ಭಿಣಿಯಾಗಿದ್ದಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ನಟಿ!

Pinterest LinkedIn Tumblr


ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಸೆಲೆಬ್ರಿಟಿಗಳು ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನವ್ಯಾ’ ಖ್ಯಾತಿಯ ನಟಿ ಸೌಮ್ಯಾ ಸೇಠ್‌ ಕೂಡ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಒಮ್ಮೆ ನಿರ್ಧರಿಸಿದ್ದರಂತೆ!

ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡ ಸೌಮ್ಯಾ ಅವರು ಅರುಣ್‌ ಕಪೂರ್‌ ಜೊತೆ ವಿವಾಹವಾದರು. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. 2018ರಲ್ಲಿ ಈ ಜೋಡಿಗೆ ಮೊದಲ ಮಗು ಜನಿಸಿತು. ಆ ಬಳಿಕ ಸೌಮ್ಯಾ ಸಂಸಾರದಲ್ಲಿ ಸಾಮರಸ್ಯ ಹಾಳಾಯಿತು. ಅದಕ್ಕೂ ಮುನ್ನ, ಅಂದರೆ ಗರ್ಭಿಣಿ ಆಗಿದ್ದಾಗಲೇ ಸೌಮ್ಯಾ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚನೆ ಮಾಡಿದ್ದರು.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಸೌಮ್ಯಾ ಹಂಚಿಕೊಂಡಿದ್ದಾರೆ. ‘ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ಆ ಸಂದರ್ಭದಲ್ಲಿ ನಾನು ಗರ್ಭಿಣಿ ಆಗಿದ್ದರಿಂದ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿದೆ. ಪಾರ್ಟಿಗಳಿಗೆ ತೆರಳಿ, ಜನರ ಜೊತೆ ಬೆರೆತು, ನಗಲು ಶುರುಮಾಡಿದೆ. ಆದರೂ ನನಗೆ ಪ್ರೀತಿಯ ಕೊರತೆ ಕಾಡುತ್ತಿತ್ತು’ ಎಂದಿದ್ದಾರೆ ಸೌಮ್ಯಾ.

ಇಂಥ ಕಷ್ಟದ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆಯೂ ಸೌಮ್ಯಾ ಹೇಳಿದ್ದಾರೆ. ಬೇರೆ ಯಾರಿಂದ ಅಲ್ಲದಿದ್ದರೂ ನಮ್ಮಿಂದಲೇ ನಾವು ಸಹಾಯ ಪಡೆದುಕೊಳ್ಳಬೇಕು. ‘ನಾವು ಗಟ್ಟಿಯಾಗಿ ನಿಲ್ಲುವ ಮೂಲಕ ಇತರರಿಗೂ ಮಾದರಿ ಆಗಬೇಕು. ನಾನು ಈ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಬೇರೆಯವರಿಗೆ ಸಹಾಯ ಆಗಲಿದೆ ಎಂಬ ಕಾರಣಕ್ಕೆ ಹಂಚಿಕೊಂಡಿದ್ದೇನೆ’ ಎಂದಿದ್ದಾರೆ ಸೌಮ್ಯಾ.

ಸುಶಾಂತ್‌ ಕೂಡ ಕಿರುತೆರೆ ಮೂಲಕವೇ ಜನರಿಗೆ ಪರಿಚಯ ಆದವರು. ನಂತರ ಸಿನಿಮಾರಂಗದಲ್ಲಿ ಮಿಂಚಿದರು. ಅವರ ಬದುಕು ಹೀಗೆ ದುರಂತ ಅಂತ್ಯ ಕಾಣಲಿದೆ ಎಂದು ಯಾರೂ ಊಹಿಸಿರಲಿಲ್ಲ. ಸುಶಾಂತ್‌ ನಿಧನಕ್ಕೆ ಕಿರುತೆರೆ ಸೆಲೆಬ್ರಿಟಿಗಳಾದ ಹಿನಾ ಖಾನ್‌, ದೀಪಿಕಾ ಕಕ್ಕರ್‌ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Comments are closed.