ಮುಂಬಯಿ: ಕಳೆದ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಎಲ್ಲರನ್ನೂ ಆಘಾತಕ್ಕೀಡುಮಾಡಿತ್ತು. ಈ ಆಘಾತದಿಂದ ಹೊರಬರಲಾಗದೆ ಬಿಹಾರದ ಪಾಟ್ನಾದಲ್ಲಿದ್ದ ಸುಶಾಂತ್ ಸಿಂಗ್ ಅಣ್ಣನ (ಕಸಿನ್) ಹೆಂಡತಿ ಸುಧಾ ದೇವಿ ನಿನ್ನೆ ಸಾವನ್ನಪ್ಪಿದ್ದಾರೆ.
ಸುಶಾಂತ್ ಸಾವಿನ ಸುದ್ದಿ ತಿಳಿದ ದಿನದಿಂದ ಅವರು ಅನ್ನ, ನೀರು ಸೇವಿಸಿರಲಿಲ್ಲ. ನಿನ್ನೆ ಮುಂಬೈನಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆಯುವಾಗಲೇ ಸುಧಾ ದೇವಿ ಕೊನೆಯುಸಿರೆಳೆದಿದ್ದಾರೆ. ಕೇವಲ 34ನೇ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಸುಶಾಂತ್ ಸಿಂಗ್ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಘಟನೆಯಿಂದಾಗಿ ಆತನ ಕುಟುಂಬಕ್ಕೆ ತೀರಾ ಆಘಾತವಾಗಿದ್ದು, ಈ ಆಘಾತವನ್ನು ಭರಿಸಲಾರದೆ ಸುಶಾಂತ್ ಸಿಂಗ್ ಅತ್ತಿಗೆ ಸಾವನ್ನಪ್ಪಿದ್ದಾರೆ.
ಕಿರುತೆರೆ ಮೂಲಕ ನಟನಾ ರಂಗಕ್ಕೆ ಬಂದ ಸುಶಾಂತ್ ಸಿಂಗ್ ರಜಪೂತ್ ಇದುವರೆಗೂ 11 ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್, ಸಿನಿಮಾ ತಾರೆಯರು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು. ಸುಶಾಂತ್ ಛಿಚ್ಚೋರೆ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.
Comments are closed.