ಮನೋರಂಜನೆ

‘ಅಣ್ಣ, ನೀನಿಲ್ಲದೇ ಇರಲು ಆಗುತ್ತಿಲ್ಲ’- ನಟ ಧ್ರುವ ಸರ್ಜಾ!

Pinterest LinkedIn Tumblr


ಕಳೆದ ಭಾನುವಾರ (ಜೂ.07) ಸ್ಯಾಂಡಲ್‌ವುಡ್‌ ಪಾಲಿಗೆ ಕರಾಳ ದಿನವಾಗಿತ್ತು. ಕನ್ನಡದ ಭರವಸೆಯ ನಟ ಚಿರಂಜೀವಿ ಸರ್ಜಾ ಹಠಾತ್ ಹೃದಯಾಘಾತದಿಂದ ನಿಧನರಾದರು. ಚಿತ್ರರಂಗಕ್ಕೆ ಇದು ದೊಡ್ಡ ಶಾಕ್‌ ಆಗಿತ್ತು. ಬಣ್ಣದ ಲೋಕಕ್ಕೆ ಅವರು ಕಾಲಿಟ್ಟು ಬರೀ 10 ವರ್ಷಗಳಾಗಿತ್ತು. ನಟಿ ಮೇಘನಾ ರಾಜ್ ಅವರನ್ನು ಮನಸಾರೆ ಇಷ್ಟಪಟ್ಟು ಮದುವೆ ಆಗಿದ್ದರು. ಇನ್ನೇನು ಕೆಲವೇ ತಿಂಗಳಲ್ಲಿ ಅವರು ತಂದೆಯಾಗಲಿದ್ದಾರೆ. ಈ ಎಲ್ಲ ಸಂಭ್ರಮಗಳನ್ನುಅರ್ಧಕ್ಕೆ ಬಿಟ್ಟು ಚಿರು ಇಹಲೋಕ ತ್ಯಜಸಿದರು. ಚಿರು ಅಗಲಿಕೆಯಿಂದ ಸಹೋದರ, ನಟ ಧ್ರುವ ಸರ್ಜಾ ತುಂಬ ನೊಂದಿದ್ದಾರೆ. ‘ಅಣ್ಣ, ನೀನಿಲ್ಲದೇ ಇರಲು ಆಗುತ್ತಿಲ್ಲ’ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ!

ಚಿರು ಸರ್ಜಾ ಸಾಯವುದಕ್ಕೂ ಒಂದು ದಿನದ ಹಿಂದೆ, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಚಿಕ್ಕವರಿದ್ದಾಗ ಧ್ರುವ ಹಾಗೂ ಸೂರಜ್‌ ಸರ್ಜಾ ಜೊತೆಗೆ ಒಂದು ಫೋಟೋವನ್ನು ಹಾಗೂ ಈಗ ಅವರ ಜೊತೆ ತೆಗೆಸಿಕೊಂಡ ಫೋಟೋವನ್ನು ಕೊಲಾಜ್‌ ಮಾಡಿ, ‘ಅಂದಿಗೂ ಇಂದಿಗೂ ನಾವೂ ಒಂದೇ’ ಎನ್ನುವ ಥರ ಕ್ಯಾಪ್ಷನ್ ನೀಡಿದ್ದರು. ಅದನ್ನು ನೋಡಿ ಅನೇಕರು ಭಾವುಕರಾಗಿದ್ದರು. ಇದೀಗ ಧ್ರುವ ಕೂಡ ಅದೇ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಗೆ ಅಪ್‌ಲೋಡ್ ಮಾಡಿದ್ದಾರೆ.

‘ನೀನು ನನಗೆ ಮತ್ತೆ ಬೇಕು. ನೀನಿಲ್ಲದೇ ಇರಲು ಆಗುತ್ತಿಲ್ಲ’ ಎಂದು ಕ್ಯಾಪ್ಷನ್ ನೀಡಿದ್ದಾರೆ.ಚಿರು ಮತ್ತು ಧ್ರುವ ಸಹೋದರರು ಎಷ್ಟೊಂದು ಅನ್ಯೋನ್ಯತೆ ಇರುತ್ತಿದ್ದರು ಎಂಬುದು ಇಡೀ ಸ್ಯಾಂಡಲ್‌ವುಡ್‌ಗೆ ಗೊತ್ತು. ಇತ್ತೀಚಿಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ಅವರಿಬ್ಬರ ಜೊತೆಗೆ ಕಳೆದ ಕ್ಷಣಗಳ ವಿಡಿಯೋಗಳನ್ನು ನೋಡಿದ ಎಂಥವರಿಗಾದರೂ ಸಂಕಟವಾಗುತ್ತದೆ. ತಮ್ಮನ ತಲೆಗೆ ಚಿರು ಎಣ್ಣೆ ಹಾಕಿ ಮಸಾಜ್ ಮಾಡುತ್ತಿರುವ ವಿಡಿಯೋ, ತಾನು ಊಟ ಮಾಡುತ್ತಿದ್ದ ತಟ್ಟೆಯಿಂದಲೇ ಅಣ್ಣನಿಗೆ ಕೈತುತ್ತು ತಿನಿಸಿದ ಧ್ರುವ ಸರ್ಜಾ ಅವರ ವಿಡಿಯೋಗಳು ಈಗಾಗಲೇ ಸಾಕಷ್ಟು ವೈರಲ್ ಆಗಿವೆ. ಈಗ ಧ್ರುವ ಇನ್‌ಸ್ಟಾಗ್ರಾಮ್‌ ಸ್ಟೇಟಸ್ ನೋಡಿದವರು ಇನ್ನಷ್ಟು ಭಾವುಕರಾಗಿದ್ದಾರೆ.

ಭಾನುವಾರ (ಜೂ.7) ಮಧ್ಯಾಹ್ನ ಹೃದಯಾಘಾತದಿಂದ ಚಿರು ನಿಧನರಾದರು. ಸೋಮವಾರ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್‌ ಹೌಸ್‌ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಚಿರು ಅಗಲಿಕೆಯಿಂದ ಸರ್ಜಾ ಕುಟುಂಬ ತೀವ್ರ ದುಃಖದಲ್ಲಿದೆ.

Comments are closed.