ಮನೋರಂಜನೆ

ಕನ್ನಡದಲ್ಲೂ ‘ಮಹಾಭಾರತ’ ಧಾರಾವಾಹಿ!

Pinterest LinkedIn Tumblr

ಲಾಕ್‌ಡೌನ್‌ನಿಂದ ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋಗಳ ಶೂಟಿಂಗ್‌ ಸ್ಥಗಿತಗೊಂಡಿದ್ದರಿಂದ ಕೆಲವು ಕಾರ್ಯಕ್ರಮಗಳ ಮರುಪ್ರಸಾರ ಅನಿವಾರ್ಯ ಆಗಿತ್ತು. ಕನ್ನಡ, ಹಿಂದಿ ಮಾತ್ರವಲ್ಲದೆ ಬಹುತೇಕ ಎಲ್ಲ ಭಾಷೆಯ ವಾಹಿನಿಗಳು ಇದೇ ಸೂತ್ರ ಅನುಸರಿಸಿದವು. ಈ ಪೈಕಿ ಕೆಲವು ಧಾರಾವಾಹಿಗಳು ಮರು ಪ್ರಸಾರಗೊಂಡು ಮತ್ತೊಮ್ಮೆ ಸೂಪರ್‌ ಹಿಟ್‌ ಎನಿಸಿಕೊಂಡಿವೆ.

ಹಿಂದಿಯಲ್ಲಿ ‘ಮಹಾಭಾರತ’ ಮತ್ತು ‘ರಾಮಾಯಣ’ ಸೀರಿಯಲ್‌ಗಳು ಕಿರುತೆರೆ ಪ್ರೇಕ್ಷಕರನ್ನು ಭರಪೂರ ರಂಜಿಸಿದವು. ಕನ್ನಡದಲ್ಲೂ ಅವುಗಳನ್ನು ವೀಕ್ಷಿಸಬೇಕು ಎಂಬುದು ಹಲವರ ಬಯಕೆ ಆಗಿತ್ತು. ಡಬ್ಬಿಂಗ್‌ ಕುರಿತಾದ ಪರ-ವಿರೋಧದ ಕಾರಣದಿಂದ ಹಿನ್ನಡೆ ಆಗಿತ್ತು. ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡಿದ್ದು, ಪ್ರಸಾರಕ್ಕೆ ಅಣಿಯಾಗಿದೆ.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಮಹಾಭಾರತ’ ಹಿಂದಿ ಧಾರಾವಾಹಿಯ ಕನ್ನಡ ಅವತರಣಿಕೆ ಪ್ರಸಾರ ಆಗಲಿದೆ. ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆದಿದ್ದು, ವೀಕ್ಷಕರಲ್ಲಿ ಕಾತರ ಹೆಚ್ಚಿದೆ. ಅಂದಹಾಗೆ, ಇದು ಬಿಆರ್‌ ಚೋಪ್ರಾ ನಿರ್ಮಾಣದ ‘ಮಹಾಭಾರತ’ ಅಲ್ಲ. ಸ್ವಸ್ತಿಕ್‌‌ ಪ್ರೊಡಕ್ಷನ್ಸ್‌ ಕಂಪನಿ ನಿರ್ಮಿಸಿದ ಈ ಧಾರಾವಾಹಿಯು ಸೆಪ್ಟೆಂಬರ್‌ 2013ರಿಂದ ಆಗಸ್ಟ್‌ 2014ರವರೆಗೆ ಹಿಂದಿಯ ‘ಸ್ಟಾರ್‌ ಪ್ಲಸ್‌’ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಒಟ್ಟು 276 ಸಂಚಿಕೆಗಳಲ್ಲಿ ಮೂಡಿಬಂದಿತ್ತು.

ಅದೇ ‘ಮಹಾಭಾರತ’ವನ್ನು ಕನ್ನಡಕ್ಕೆ ಡಬ್‌ ಮಾಡಲಾಗಿದೆ. ಮೇ 11ರಿಂದ ಕನ್ನಡದ ‘ಸ್ಟಾರ್‌ ಸುವರ್ಣ’ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಮಾಡಲು ಸ್ಲಾಟ್‌ ನಿಗದಿ ಆಗಿದೆ. ಇತ್ತೀಚೆಗಷ್ಟೇ ‘ಮಾಲ್ಗುಡಿ ಡೇಸ್‌’ ಕೂಡ ಕನ್ನಡಕ್ಕೆ ಡಬ್‌ ಆಗಿದೆ ಎಂಬ ಸುದ್ದಿ ಕೇಳಿ ಖುಷಿ ಪಟ್ಟಿದ್ದ ಕಿರುತೆರೆ ವೀಕ್ಷಕರ ಸಂಭ್ರಮವನ್ನು ಈಗ ‘ಮಹಾಭಾರತ’ ಕೂಡ ಹೆಚ್ಚಿಸಲಿದೆ.

276 ಸಂಚಿಕೆಗಳನ್ನು ಒಳಗೊಂಡ ಈ ‘ಮಹಾಭಾರತ’ವನ್ನು ಸಿದ್ದಾರ್ಥ್‌ ಆನಂದ್‌, ಮುಕೇಶ್‌ ಕುಮಾರ್‌ ಸಿಂಗ್‌ ಸೇರಿದಂತೆ ಐವರು ನಿರ್ದೇಶಿಸಿದ್ದರು. ಸೌರಭ್‌ ರಾಜ್‌ ಜೈನ್‌, ಶಾಹೀರ್‌ ಶೇಕ್‌, ಪೂಜಾ ಶರ್ಮಾ, ಆರವ್‌ ಚೌಧರಿ, ಪ್ರಣೀತ್‌ ಭಟ್‌ ಮುಂತಾದವರು ಮುಖ್ಯ ಪಾತ್ರಗಳನ್ನು ನಿಭಾಯಿಸಿರುವ ಈ ಧಾರಾವಾಹಿಗೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ಸಂಯೋಜಕರಾದ ಇಸ್ಮಾಯಿಲ್‌ ದರ್ಬಾರ್‌ ಹಾಗೂ ಅಜಯ್‌-ಅತುಲ್‌.

Comments are closed.