ಮನೋರಂಜನೆ

ಸಾವಿಗೆ ಸಿದ್ಧನಾಗಿಯೇ ಸುಂದರ ಬದುಕು ನಡೆಸುವೆ; ರಾಜ್ಯದ ಹಿರಿಯ ರಂಗಕರ್ಮಿ ಪ್ರಸನ್ನಗೆ ಇರ್ಫಾನ್ ಖಾನ್ ಪತ್ರ

Pinterest LinkedIn Tumblr


ನಾನು ಕ್ಯಾನ್ಸರ್‌ಗೆ ಶರಣಾಗಿದ್ದೇನೆ. ನನಗೆ ಬದುಕು ಎಷ್ಟು ಸುಂದರ ಅಂತ ಈಗ ಗೊತ್ತಾಗುತ್ತಿದೆ. ಉಳಿದ ಜೀವನವನ್ನು ನಾನು ಇನ್ನೂ ಚೆನ್ನಾಗಿ ಕಳೆಯುವೆ… !

-ಇದು ಹಿರಿಯ ರಂಗಕರ್ಮಿ ಪ್ರಸನ್ನ ಅವರಿಗೆ ಇರ್ಫಾನ್‌ ಖಾನ್‌ ಬರೆದ ಪತ್ರದ ಸಾಲು. ತನಗೆ ಕ್ಯಾನ್ಸರ್‌ ಎಂದು ಗೊತ್ತಾದ ತಕ್ಷಣ ಇರ್ಫಾನ್‌ ಖಾನ್‌ ಸಾಗರ ಸಮೀಪದ ಆನಂದಪುರಕ್ಕೆ ಬಂದು ಚಿಕಿತ್ಸೆ ತೆಗೆದುಕೊಂಡಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ಹೋದರು. ಅಲ್ಲಿಂದ ಪ್ರಸನ್ನ ಅವರಿಗೆ ಪತ್ರ ಬರೆದು, ಕ್ಯಾನ್ಸರ್‌ಗೆ ಶರಣಾಗಿರುವುದಾಗಿ ತಿಳಿಸಿದ್ದರು. ”ಕ್ಯಾನ್ಸರ್‌ ಬಂದು ಬಳಿಕ ಇರ್ಫಾನ್‌ ಮೊದಲಿಗಿಂತ ಚೆಂದದ ಬದುಕನ್ನೇ ಬದುಕಿದ ಎನ್ನುತ್ತಾರೆ,” ರಂಗಕರ್ಮಿ ಪ್ರಸನ್ನ.

ಕರ್ನಾಟಕಕ್ಕೂ, ಪ್ರಸನ್ನ ಅವರಿಗೂ, ಮೈಸೂರಿನ ರಂಗಾಯಣಕ್ಕೂ ಇರ್ಫಾನ್‌ಗೂ ಬಿಡಿಸಲಾಗದ ನಂಟು. ಎರಡು ಬಾರಿ ಮೈಸೂರಿನ ರಂಗಾಯಣಕ್ಕೆ ಆಗಮಿಸಿದ್ದ ಇರ್ಫಾನ್‌ 2016 ಏ.19ರಂದು ನಂಜನಗೂಡು ತಾಲೂಕು ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದರು. ರಂಗಕರ್ಮಿ ಪ್ರಸನ್ನ ಅವರು ಅಲ್ಲಿ ನಡೆಸುತ್ತಿದ್ದ ‘ಬದನವಾಳು ಸತ್ಯಾಗ್ರಹ ಹಾಗೂ ಸುಸ್ಥಿರ ಬದುಕಿನ ಸಮಾವೇಶ”ಕ್ಕೆ ಬೆಂಬಲ ನೀಡಿದ್ದರು.

”ನನ್ನ ರಂಗಭೂಮಿ ಗುರು ಪ್ರಸನ್ನ ಅವರು ನಡೆಸುತ್ತಿರುವ ಈ ಸುಸ್ಥಿರ ಬದುಕಿನ ಸಮಾವೇಶದ ಬಗ್ಗೆ ಕೇಳಿ ಬಹಳ ಕುತೂಹಲಿಯಾಗಿ ಇಲ್ಲಿಗೆ ಬಂದಿದ್ದೆ. ಬದನವಾಳಿನಲ್ಲಿಯೇ ರಾತ್ರಿ ತಂಗಿದ್ದೆ. ಗುಡಿ ಕೈಗಾರಿಕೆಯ ಬಗ್ಗೆ ಸಮಾಜದಲ್ಲಿ ಅರಿವು ಮೂಡುವ ಅಗತ್ಯವಿದೆ. ಹೀಗಾಗಿ ಇಂಥ ಕಾರ್ಯವನ್ನು ಬೆಂಬಲಿಸಬೇಕು,” ಎಂದಿದ್ದರು.

ಮೈಸೂರಿನ ಪತ್ರಕರ್ತರ ಸಂವಾದದಲ್ಲಿ ಭಾಗವಹಿಸಿದ್ದ ಇರ್ಫಾನ್‌ ಗ್ರಾಮೀಣ ಜೀವನದ ಬಗ್ಗೆ ಮಾತನಾಡಿದ್ದರು. ”ಜೈಪುರ ಎಂಬ ಸಣ್ಣ ನಗರದಿಂದ ನಾನು ಬಂದವನು. ಸಣ್ಣವನಿದ್ದಾಗ ಸಣ್ಣ ನಗರಗಳಲ್ಲಿ ಕಳೆದೆ. ಈಗ ಮುಂಬಯಿನಂಥ ಮಹಾನಗರದಲ್ಲಿದ್ದೇನೆ. ಬದಲಾದ ಜೀವನಶೈಲಿ ಹಾಗೂ ಅಭಿವೃದ್ಧಿ ಎನ್ನುವುದು ಶರವೇಗದಲ್ಲಿ ಆಗುತ್ತಿರುವುದನ್ನು ಇಂಥ ನಗರಗಳಲ್ಲಿ ಕಾಣುತ್ತಿದ್ದೇವೆ. ಹಳ್ಳಿಗಳಲ್ಲಿ ಇಂದಿಗೂ ಆರೋಗ್ಯಕರ ಜೀವನ ನಡೆಸಬಹುದು. ಆದರೆ, ನಗರದಲ್ಲಿ ಇದು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ನಮ್ಮದೇ ಆದ ಮಾರ್ಗದಲ್ಲಿ ಜೀವನ ನಡೆಸಬಹುದು. ಸ್ವದೇಶಿ ಕಲ್ಪನೆಯೂ ಇದೆ. ಆದರೆ, ನಗರದಲ್ಲಿ ಪಾಶ್ಚಿಮಾತ್ಯ ಪರಿಕಲ್ಪನೆಯಲ್ಲಿ ಅಭಿವೃದ್ಧಿಯಾಗುತ್ತಿದೆ. ಹಿಂದೆ ನಾವು ಪರಿಸರದೊಂದಿಗೆ ಜೀವಿಸುತ್ತಿದ್ದೆವು. ಪರಿಸರದೊಂದಿಗೆ ಅನ್ಯೋನ್ಯವಾದ ಸಂಬಂಧ ಹೊಂದಿದ್ದೆವು. ಆದರೆ, ಈಗಿನ ಪಾಶ್ಚಿಮಾತ್ಯ ಸಂಸ್ಕೃತಿಯು ಬಳಸಿ ಬಿಸಾಡು (ಯೂಸ್‌ ಅಂಡ್‌ ಥ್ರೋ) ಸಂಸ್ಕೃತಿಯನ್ನು ಹುಟ್ಟುಹಾಕಿದೆ. ನಮ್ಮ ದೇಶಕ್ಕೆ ಈ ಸಂಸ್ಕೃತಿ ಒಳ್ಳೆಯದಲ್ಲ” ಎಂದು ಪ್ರತಿಪಾದಿಸಿದ್ದರು.

Comments are closed.