ಮನೋರಂಜನೆ

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿಕಪೂರ್ ನಿಧನ

Pinterest LinkedIn Tumblr

ಮುಂಬೈ: ಖ್ಯಾತ ನಟ ಇರ್ಫಾನ್​ ಖಾನ್​ ಅವರನ್ನು ಕಳೆದುಕೊಂಡ ದುಃಖ ಮಾಸುವ ಮೊದಲೇ ಭಾರತೀಯ ಸಿನಿಮಾ ಲೋಕಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ನಟ ರಿಷಿ ಕಪೂರ್ ​ ಅವರು ಇಂದು ಮುಂಜಾನೆ ಮುಂಬೈನಲ್ಲಿ ಮೃತಪಟ್ಟಿದ್ದಾರೆ.

67 ವರ್ಷದ ರಿಷಿ ಕಪೂರ್​ಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. “ರಿಷಿ​ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ,” ಎಂದು ರಣಧೀರ್​ ಕಪೂರ್​ ಪಿಟಿಐಗೆ ತಿಳಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕ್ಯಾನ್ಸರ್​ ಕಾಣಿಸಿಕೊಂಡ ನಂತರ ರಿಷಿ ಕಪೂರ್​ ಅಮೆರಿಕಕ್ಕೆ ತೆರಳಿ ಒಂದು ವರ್ಷ ಚಿಕಿತ್ಸೆ ಪಡೆದಿದ್ದರು. ಕಳೆದ ಸೆಪ್ಟೆಂಬರ್​ನಲ್ಲಿ ಅವರು ಭಾರತಕ್ಕೆ ವಾಪಾಸಾಗಿದ್ದರು.

ಫೆಬ್ರವರಿಯಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ದೆಹಲಿಯಲ್ಲಿ ಕುಟುಂಬದ ಕಾರ್ಯಕ್ರಮಕ್ಕೆ ತೆರಳಿದ್ದಾಗ ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಅವರು ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರಿಗೆ ಇನ್​ಫೆಕ್ಷನ್​ ಆಗಿತ್ತು ಎಂದು ಹೇಳಲಾಗಿತ್ತು. ಮುಂಬೈಗೆ ವಾಪಾಸಾದ ನಂತರ ವೈರಲ್​ ಫಿವರ್​ ಕಾಣಿಸಿಕೊಂಡಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

ರಿಷಿ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತಾ ಆಕ್ಟಿವ್​ ಆಗಿರುತ್ತಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಅವರು ಯಾವುದೇ ಪೋಸ್ಟ್​ ಹಾಕಿಲ್ಲ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಸೆಟ್ಟೇರುವ ಮೊದಲೇ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

ರಿಷಿ ಕಪೂರ್​ ಸಾವಿಗೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಿಷಿ ಕಪೂರ್ ಆಪ್ತ ಅಮಿತಾಭ್​ ಬಚ್ಚನ್​ ತೀವ್ರ ಬೇಸರಗೊಂಡಿರುವುದಾಗಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

Comments are closed.