ಮನೋರಂಜನೆ

35 ಕೆ.ಜಿ ತೂಕ ಇಳಿಸಿಕೊಂಡಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್

Pinterest LinkedIn Tumblr


ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ (44) ಸೋಮವಾರ (ಮಾರ್ಚ್ 6) ನಿಧನರಾಗಿದ್ದಾರೆ. ಲಿವರ್ ಸೋಂಕಿನಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಭಾನುವಾರಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತಿ ಬುಲೆಟ್ ಪ್ರಕಾಶ್‌ಗೆ ಸಲ್ಲುತ್ತದೆ.

ಇದಕ್ಕೂ ಮುನ್ನ ಮಾರ್ಚ್ 31ರಂದು ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು ಬುಲೆಟ್ ಪ್ರಕಾಶ್. ಲಿವರ್, ಕಿಡ್ನಿ ವಿಫಲವಾಗಿದ್ದ ಕಾರಣ ಅವರನ್ನು ಡಯಾಲಿಸಿಸ್‍ಗೆ ಒಳಪಡಿಸಲಾಗಿತ್ತು. ಆದಷ್ಟು ಬೇಗ ಚೇತರಿಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಗೂ ವಿಧಿ ಅವರನ್ನು ಬಿಡಲಿಲ್ಲ.

ಬುಲೆಟ್ ಪ್ರಕಾಶ್ ಅವರನ್ನು ನೋಡಿದರೆ ದಢೂತಿ ದೇಹವೇ ಕಣ್ಮುಂದೆ ಬಂದು ನಿಲ್ಲುತ್ತದೆ. ಸಿನಿಮಾಗಳಲ್ಲಿ ಹಾಸ್ಯ ಸ್ಫುರಿಸಲು ಈ ದಢೂತಿ ದೇಹವೇ ಅವರ ಪಾಲಿಗೆ ವರವಾಗಿತ್ತು. ಆದರೆ ಅನಾರೋಗ್ಯಕ್ಕೆ ಒಳಗಾದ ಬಳಿಕ ಐದು ತಿಂಗಳಲ್ಲಿ ಸುಮಾರು 35 ಕೆ.ಜಿ ತೂಕ ಕಳೆದುಕೊಂಡಿದ್ದರು ಬುಲೆಟ್. ಕಿಡ್ನಿ ಹಾಗೂ ಲಿವರ್ ವೈಫಲ್ಯ ಅವರನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು.

ತೂಕ ಇಳಿಕೆಯಾಗಿದ್ದೇ ಅವರ ಅನಾರೋಗ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಯಿತಾ? ಎರಡು ವರ್ಷಗಳ ಹಿಂದೆ ಬುಲೆಟ್ ಪ್ರಕಾಶ್ ತೂಕ ಕಡಿತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಾದ ಬಳಿಕ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತಾ ಬಂತು. ಇದರ ಜೊತೆಗೆ ಕಿಡ್ನಿ, ಲಿವರ್ ವೈಫಲ್ಯ ಸಮಸ್ಯೆಯ ಜೊತೆಯಾಗಿ ಬುಲೆಟ್‍ರನ್ನು ಇನ್ನಷ್ಟು ಹೈರಾಣಾಗಿಸಿತ್ತು. ಭಾನುವಾರ ಬೆಳಗ್ಗೆ ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು.

ಧ್ರುವ ಸಿನಿಮಾ ಮೂಲಕ ಬೆಳ್ಳಿಪರದೆ ಅಡಿಯಿಟ್ಟ ಬುಲೆಟ್ ಪ್ರಕಾಶ್ ಕನ್ನಡ, ತಮಿಳು ಸೇರಿದಂತೆ ಹಲವಾರು ಭಾಷೆಯ 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2015ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು ಬುಲೆಟ್. ಪುನೀತ್ ರಾಜ್ ಕುಮಾರ್, ದರ್ಶನ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆಗೆ ಅಭಿನಯಿಸಿದ ಖ್ಯಾತಿ ಬುಲೆಟ್ ಪ್ರಕಾಶ್ ಅವರದ್ದು.

ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕನ್ನು ಓಡಿಸುತ್ತಿದ್ದ ಕಾರಣ ಪ್ರಕಾಶ್ ಹೆಸರಿಗೆ ಬುಲೆಟ್ ಸೇರ್ಪಡೆಯಾಗಿತ್ತು. ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲೂ ಸ್ಪರ್ಧಿಸಿದ್ದರು.

Comments are closed.