
ಬೆಂಗಳೂರು: ಕಿರುತೆರೆ ನಟಿ ರಾಧಿಕಾ ರಾವ್ ಅವರು ತಮ್ಮ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೂಲತಃ ಮಂಗಳೂರಿನವರಾಗಿರುವ ರಾಧಿಕಾ ರಾವ್ ಬುಧವಾರ ತಮ್ಮ ಗೆಳೆಯ ಆಕರ್ಷ್ ಭಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ದಂಪತಿಯೆ ಮದುವೆ ಮೂಡಬಿದಿರೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ಗುರು-ಹಿರಿಯರು ನಿಶ್ಚಯಿಸಿದ್ದ ಮುಹೂರ್ತದಲ್ಲಿ ಅವರ ಸಮ್ಮುಖದಲ್ಲಿ ಆಕರ್ಷ್ ತಮ್ಮ ಗೆಳತಿ ರಾಧಿಕಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.
ರಾಧಿಕಾ ಮತ್ತು ಆಕರ್ಷ್ ವಿವಾಹ ಕಾರ್ಯಕ್ರಮಕ್ಕೆ ಸಂಬಂಧಿಕರು, ಆತ್ಮೀಯರು ಮತ್ತು ಕಿರುತೆರೆ ಕಲಾವಿದರು ಬಂದು ನವ ಜೋಡಿಗೆ ಶುಭಾ ಹಾರೈಸಿದ್ದಾರೆ. ಎಂಜಿನಿಯರಿಂಗ್ ಓದಿರುವ ವರ ಆಕರ್ಷ್ ಭಟ್ ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ರಾಧಿಕಾಗೆ ಅವರ ಗೆಳತಿಯ ಮೂಲಕ ಆಕರ್ಷ್ ಪರಿಚಯ ಆಗಿದೆ. ಪರಿಚಯ ಸ್ನೇಹವಾಗಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಸ್ನೇಹ ಪ್ರೀತಿಯಾಗಿ ಆಕರ್ಷ್, ರಾಧಾ ಅವರಿಗೆ ಪ್ರಪೋಸ್ ಮಾಡಿದ್ದಾರೆ. ರಾಧಿಕಾ ಕೂಡ ಸಂತಸದಿಂದಲೇ ಆಕರ್ಷ್ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ನಂತರ ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿದ್ದರು. ಬಳಿಕ ಎರಡೂ ಕುಟುಂಬದವರು ಒಪ್ಪಿ ಅಕ್ಟೋಬರ್ 13 ರಂದು ಎಂಗೇಜ್‍ಮೆಂಟ್ ಮಾಡಿದ್ದರು.
ರಾಧಿಕಾ ತನ್ನ ನಿಶ್ಚಿತಾರ್ಥದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, “ಇವನು ನನ್ನ ಹೃದಯವನ್ನು ಕದ್ದನು. ಹಾಗಾಗಿ ನಾನು ಅವನ ಕೊನೆಯ ಹೆಸರನ್ನು ಕದಿಯಲು ಹೋಗುತ್ತಿದ್ದೇನೆ. ಈ ನಿಶ್ಚಿತಾರ್ಥದಿಂದ ನಾವಿಬ್ಬರು ಜೀವನದಾದ್ಯಂತ ಒಟ್ಟಾಗಿ ಇರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಬರೆದುಕೊಂಡಿದ್ದರು.
ರಾಧಿಕಾ ರಾವ್ ಈ ಹಿಂದೆ ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಸೀರಿಯಲ್‍ನಲ್ಲಿ ಅಭಿನಯಿಸುತ್ತಿದ್ದರು. ಈ ಸೀರಿಯಲ್‍ನಲ್ಲಿ ಅಮೂಲ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಈಕೆ ಅಮುಲ್ಯಾ ಎಂದೇ ಪ್ರೇಕ್ಷಕರಿಗೆ ಚಿರಪರಿಚಿತಾಗಿದ್ದರು. ಈಗ ‘ರಾಧಾ ಕಲ್ಯಾಣ’ ಧಾರವಾಹಿಯಲ್ಲಿ ರಾಧಾ ಪಾತ್ರಧಾರಿಯಾಗಿ ಜನರ ಮನ ಸೆಳೆದಿದ್ದಾರೆ.
Comments are closed.