ಮನೋರಂಜನೆ

ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆ

Pinterest LinkedIn Tumblr


ಚೆನ್ನೈ: ತಮಿಳು ನಟಿಯೊಬ್ಬಳು ತನ್ನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪಿ.ಪದ್ಮಜಾ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಈಕೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಳು. ಆದರೆ ಭಾನುವಾರ ತಿರುವೊಟ್ಟಿಯೂರ್ ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಪದ್ಮಜಾ ಕಲಾದಿಪೇಟೆಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಈಕೆಗೆ ಪವನ್ (25) ಎಂಬವರ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಮಗನನ್ನು ಸಂಬಂಧಿಕರ ಮನೆಯಲ್ಲಿ ಬೆಳೆಸಲಾಗುತ್ತಿದೆ. ದಂಪತಿ ವಾರಾಂತ್ಯದಲ್ಲಿ ಮಗನನ್ನು ಭೇಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪದ್ಮಜಾ ಕಳೆದ ತಿಂಗಳು ಪತಿಯಿಂದ ದೂರವಾಗಿದ್ದಳು. ಪತಿ ಪವನ್ ಆಂಧ್ರ ಪ್ರದೇಶಕ್ಕೆ ಶಿಫ್ಟ್ ಆಗಿದ್ದರು. ಸಾಲದ ಕಾರಣದಿಂದಾಗಿ ಪದ್ಮಜಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ ಶನಿವಾರ ತನ್ನ ಸಹೋದರಿಗೆ ವಿಡಿಯೋ ಕಾಲ್ ಮಾಡಿದ್ದಳು. ಈ ವೇಳೆ ಪದ್ಮಜಾ ಆರ್ಥಿಕ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಳು. ಅಲ್ಲದೇ ಸಿನಿಮಾ ಮತ್ತು ಸೀರಿಯಲ್‍ನಲ್ಲಿ ಮುಖ್ಯವಾದ ಪಾತ್ರ ಸಿಗುತ್ತಿಲ್ಲ ಎಂದು ಮಾತನಾಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ದಿನಗಳಿಂದ ಮನೆ ಲಾಕ್ ಆಗಿರುವುದನ್ನು ನೋಡಿದ ಮನೆಯ ಮಾಲೀಕ ಎಸ್.ಕಾಶಿನಾಥನ್ ಅನುಮಾನಗೊಂಡು ತಿರುವೊಟ್ಟಿಯೂರ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಪದ್ಮಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಸದ್ಯಕ್ಕೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Comments are closed.