ಮನೋರಂಜನೆ

ಕೆಜಿಎಫ್ ಚಾಪ್ಟರ್ 2ರ ಒಂದು ದೃಶ್ಯಕ್ಕಾಗಿ ಯಶ್ 6 ತಿಂಗಳು ಕಸರತ್ತು

Pinterest LinkedIn Tumblr

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಗಿಯುತ್ತಾ ಬಂದರೂ ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಲೇ ಇವೆ. ಬಾಲಿವುಡ್ ತಾರೆಯರ ಆಗಮನದ ಬಳಿಕ ಇದೀಗ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದ್ದು, ಕೇವಲ 10 ನಿಮಿಷದ ಶೂಟಿಂಗ್‍ಗಾಗಿ ರಾಕಿ ಭಾಯ್ ಮಾಡಿದ ಕಸರತ್ತಿನ ಬಗ್ಗೆ ಸುದ್ದಿ ಹೊರಬಿದ್ದಿದೆ.

ಇಡೀ ಭಾರತೀಯ ಚಿತ್ರರಂಗವೆ ಕುತೂಹಲದಿಂದ ಕಾಯುತ್ತಿರುವ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕವಾಗಿ ಮೂಡಿ ಬರಲಿದೆ ಎಂಬುದಕ್ಕೆ ಪರಭಾಷೆಯ ನಟರು ಚಿತ್ರ ತಂಡ ಸೇರಿರುವುದೇ ಸಾಕ್ಷಿ. ಸಿನಿಮಾದ ಪ್ರಮುಖ ಭಾಗವಾಗಿರುವ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ. ರಾಕಿ ಭಾಯ್ ಮತ್ತು ಬಾಲಿವುಡ್ ಮುನ್ನಾಭಾಯ್ ನಡುವಿನ ಭಯಾನಕ ಕಾಳಗ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಮತ್ತು ಸಂಜಯ್ ದತ್ ನಡುವಿನ ಚಿತ್ರದ ಹೈ ವೋಲ್ಟೇಜ್ ಆ್ಯಕ್ಷನ್ ದೃಶ್ಯ ಸೆರೆಹಿಡಿಯಲು ಚಿತ್ರತಂಡ ಸಿದ್ಧವಾಗಿದೆ. ಈ ಆ್ಯಕ್ಷನ್ ದೃಶ್ಯಕ್ಕೆ ಸಾಕಷ್ಟು ತಯಾರಿ ನಡೆಸಿದ್ದು, ಇನ್ನೂ ವಿಶೇಷ ಎಂಬಂತೆ ಈ ಪ್ರಮುಖ ದೃಶ್ಯಕ್ಕಾಗಿ ಯಶ್ ಬರೋಬ್ಬರಿ 6 ತಿಂಗಳಿಂದ ತಯಾರಿ ನಡೆಸಿದ್ದಾರಂತೆ.

ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಮೀರಿ ಸಿನಿಮಾ ಮೂಡಿ ಬರಬೇಕು ಎನ್ನುವ ಉದ್ದೇಶದಿಂದ ಶ್ರಮ ವಹಿಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದರ ಭಾಗವಾಗಿ ರಾಕಿ ಭಾಯ್ ಪಾತ್ರಕ್ಕಾಗಿ ಯಶ್ ಸಹ ಸಖತ್ ರಿಸ್ಕ್ ತೆಗೆದುಕೊಂಡಿದ್ದಾರೆ. ಈ ಒಂದು ದೃಶ್ಯಕ್ಕಾಗಿ ಯಶ್ ಸಹ ಬರೋಬ್ಬರಿ 6 ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಮತ್ತು ಸಂಜಯ್ ದತ್ ನಡುವೆ ಬೇರ್ ಬಾಡಿ ಫೈಟಿಂಗ್ ದೃಶ್ಯ ಇರುತ್ತೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ದೃಶ್ಯಕ್ಕಾಗಿ ಚಿತ್ರತಂಡ ಸಾಕಷ್ಟು ಶ್ರಮಿಸುತ್ತಿದೆಯಂತೆ. ಅಲ್ಲದೆ ಸಂಜಯ್ ಮತ್ತು ಯಶ್ ಇಬ್ಬರೂ ಭರ್ಜರಿ ತಯಾರಿ ನಡೆಸಿದ್ದಾರೆ. ಈ ದೃಶ್ಯಕ್ಕಾಗಿ ಯಶ್ ಸಹ 6 ತಿಂಗಳಿಂದ ತಾಲೀಮು ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಕೆಜಿಎಫ್-2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆಯಂತೆ. ಚಿತ್ರದ ಬಹುಮುಖ್ಯ ಭಾಗ ಇದೇ ದೃಶ್ಯ ಆಗಿರುವುದರಿಂದ ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರೀಕರಿಸಲಾಗುತ್ತಿದೆ. ಹೀಗಾಗಿ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಕ್ಲೈಮ್ಯಾಕ್ಸ್ ಸೀನ್ ಹೇಗಿರಲಿದೆ ಎನ್ನುವ ಕುತೂಹಲ ಇದೀಗ ಮನೆ ಮಾಡಿದೆ.

ಕೆಜಿಎಫ್-2 ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಇಡೀ ದೇಶವೇ ತುದಿಗಾಲಲ್ಲಿ ಕಾಯುತ್ತಿದೆ. ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಚಿತ್ರೀಕರಣ ತಡವಾದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಬಹುದು ಎನ್ನಲಾಗಿದೆ.

Comments are closed.