ಮನೋರಂಜನೆ

ಯುವರತ್ನ ಹೊಸ ಲುಕ್‌ನಲ್ಲಿ ಪುನೀತ್‌ ಜೊತೆ ಹೊಸ ಪ್ರವೇಶ?

Pinterest LinkedIn Tumblr


ಅಂದುಕೊಂಡಂತೆಯೇ ಜ.1ರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ‘ಯುವರತ್ನ’ ಚಿತ್ರದ ಹೊಸ ಲುಕ್‌ ಒಂದನ್ನು ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಿದೆ. ಅದನ್ನು ಕಂಡ ಅನೇಕರಿಗೆ ಅಚ್ಚರಿಯೂ ಅಚ್ಚರಿ. ಯಾಕೆಂದರೆ ಪುನೀತ್‌ ಜತೆಗೆ ಒಂದು ಅಸ್ಥಿಪಂಜರ ಕೂಡ ಪೋಸ್‌ ನೀಡಿದೆ! ವಿಕ್ರಮ ಮತ್ತು ಬೇತಾಳನ ಮಾದರಿಯಲ್ಲಿ ಅಸ್ಥಿಪಂಜರವನ್ನು ತಮ್ಮ ಬೆನ್ನಮೇಲೆ ಕೂರಿಸಿಕೊಂಡಿದ್ದಾರೆ ‘ಪವರ್‌ಸ್ಟಾರ್‌’. ಅದರ ಜತೆಗೆ ಹ್ಯಾಪಿ ನ್ಯೂ ಇಯರ್‌, 2020 ಎಂದು ಶುಭಾಶಯ ಕೋರಲಾಗಿದೆ.

ಅಸ್ಥಿಪಂಜರದ ಹಾಜರಿಗೆ ಕಾರಣ ಏನು?
ಪ್ರತಿ ಪೋಸ್ಟರ್‌ ಬಿಡುಗಡೆ ಆದಾಗಲೂ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟು ಆಗುತ್ತಲೇ ಇದೆ. ಇನ್ನು, ಈ ಅಸ್ಥಿಪಂಜರಕ್ಕೂ ಚಿತ್ರದ ಕಥೆಗೂ ಸಂಬಂಧ ಏನಿರಬಹುದು ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ಶುರುವಾಗಿದೆ. ಹೊಸ ಲುಕ್‌ ಬಿಡುಗಡೆ ಮಾಡುವುದಾಗಿ ತಿಳಿಸಲು ಡಿ.31ರಂದು ಹೊಂಬಾಳೆ ಫಿಲಂಸ್‌ ಒಂದು ಟ್ವೀಟ್‌ ಮಾಡಿತ್ತು. ಅದರಲ್ಲಿಯೂ ಅಸ್ಥಿಪಂಜರದ ಮುಖ ಕಾಣಿಸಿತ್ತು. ಹೀಗೆ ಪದೇಪದೇ ಇದರ ಪ್ರಸ್ತಾಪ ಆಗುತ್ತಿರುವುರಿಂದ ಇದು ಕೂಡ ಸಿನಿಮಾದಲ್ಲಿ ಒಂದು ಮುಖ್ಯ ಅಂಶ ಆಗಿರಲಿದೆ ಎಂಬುದು ಖಚಿತ ಆದಂತಾಗಿದೆ. ಇಷ್ಟೇ ಅಲ್ಲ, ಈ ಹೊಸ ಲುಕ್‌ನ ಹಿನ್ನೆಲೆಯಲ್ಲಿ ಒಂದು ಡೈನೋಸಾರ್‌ನ ಅಸ್ಥಿಪಂಜರ ಚಿತ್ರ ಕೂಡ ಹೈಲೈಟ್‌ ಆಗಿದೆ. ಅದರ ಬಗ್ಗೆಯೂ ಭಾರಿ ಕುತೂಹಲ ಸೃಷ್ಟಿಯಾಗಿದೆ.

ಹೊಸ ಲುಕ್‌ಗೆ ಭರಪೂರ ಮೆಚ್ಚುಗೆ
ಹೊಸ ವರ್ಷದ ಸಲುವಾಗಿ ರಿಲೀಸ್‌ ಆಗಿರುವ ಈ ಹೊಸ ಲುಕ್‌ ಕಂಡು ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತುಂಬ ಡಿಫರೆಂಟ್‌ ಆಗಿ ಪೋಸ್ಟರ್‌ ವಿನ್ಯಾಸಗೊಳಿಸಿರುವುದರಿಂದ ಚಿತ್ರತಂಡಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ, ಚಿತ್ರರಂಗದ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ‘ಚಿತ್ರದ ಪೋಸ್ಟರ್‌ ತುಂಬ ವಿಶಿಷ್ಟವಾಗಿದೆ. ಇಡೀ ತಂಡಕ್ಕೆ ಶುಭವಾಗಲಿ’ ಎಂದು ‘ಪೈಲ್ವಾನ್‌’ ನಿರ್ದೇಶಕ ಕೃಷ್ಣ ಶುಭಕೋರಿದ್ದಾರೆ. ಪೋಸ್ಟರ್‌ನಲ್ಲಿರುವ ಎಲ್ಲಾ ಅಂಶಗಳನ್ನು ಗಮನಿಸಿ, ಅದಕ್ಕೆ ಹಲವು ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ ಸಿನಿಪ್ರಿಯರು. ಒಟ್ಟಿನಲ್ಲಿ, ಈ ಹೊಸ ಲುಕ್‌ ಮೂಲಕ ‘ಯುವರತ್ನ’ ಚಿತ್ರದ ಬಗ್ಗೆ ಭರ್ಜರಿ ಟಾಕ್‌ ಶುರುವಾಗಿದೆ.

ಇನ್ನೂ ಕಾದಿವೆ ಅಚ್ಚರಿಗಳು
ಹಂತ ಹಂತವಾಗಿ ಒಂದೊಂದೇ ಅಚ್ಚರಿಗಳನ್ನು ಬಹಿರಂಗ ಪಡಿಸುತ್ತಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌. ಈಗಾಗಲೇ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸೃಷ್ಟಿಸಲಾಗಿದೆ. ಇನ್ನೂ ಟ್ರೇಲರ್‌ ಹಾಗೂ ಆಡಿಯೋ ಬಿಡುಗಡೆ ಬಾಕಿ ಇದೆ. ಖ್ಯಾತ ಸಂಗೀತ ನಿರ್ದೇಶಕ ಎಸ್‌. ಥಮನ್‌ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿರುವುದರಿಂದ ಸಹಜವಾಗಿಯೇ ಅಭಿಮಾನಿಗಳಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಚಿತ್ರದಲ್ಲಿ ಪುನೀತ್‌ಗೆ ಜೋಡಿಯಾಗಿ ಸಾಯೆಷಾ ಸೇಗಲ್‌ ನಟಿಸುತ್ತಿದ್ದಾರೆ.

Comments are closed.