ಮನೋರಂಜನೆ

ನಟಿ ಮಹಾಲಕ್ಷ್ಮೀ ಕ್ರೈಸ್ತ ಸನ್ಯಾಸಿನಿ ಆಗಿದ್ದಾರಾ?

Pinterest LinkedIn Tumblr


80ರ ದಶಕದಲ್ಲಿ ನಟಿ ಮಹಾಲಕ್ಷ್ಮೀ ಕನ್ನಡ ಚಿತ್ರರಂಗಕ್ಕೆ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಮೂಲತಃ ತಮಿಳು ನಟಿಯಾದರೂ, ಕನ್ನಡ ಸಿನಿಮಾಗಳಲ್ಲೇ ಅವರು ಹೆಚ್ಚು ಕಾಣಿಸಿಕೊಂಡಿದ್ದು. ಡಾ. ರಾಜ್‌ಕುಮಾರ್ ವಿಷ್ಣುವರ್ಧನ್‌, ರವಿಚಂದ್ರನ್‌, ಅನಂತ್ ನಾಗ್ ಸೇರಿ ಕನ್ನಡದ ಖ್ಯಾತ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಅವರದ್ದು. ಅಚ್ಚರಿ ಎಂದರೆ, 1983ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಡುವ ಅವರು, ಕೇವಲ ಎಂಟೇ ವರ್ಷಗಳಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. 1991ರಲ್ಲಿ ತೆರೆಕಂಡ ‘ದುರ್ಗಾಷ್ಟಮಿ’ ಚಿತ್ರದ ನಂತರ ಕನ್ನಡ ಚಿತ್ರರಂಗದಿಂದ ದೂರವಾದರು. ಹಾಗಾದರೆ, ಅವರು ಎಲ್ಲಿದ್ದಾರೆ? ಈಗೇಕೆ ಅವರ ಬಗ್ಗೆ ಮಾತು? ಇಲ್ಲಿದೆ ಮಾಹಿತಿ.

ಹೌದು, ‘ಸ್ವಾಭಿಮಾನ’, ‘ಜಯಸಿಂಹ’, ‘ಬ್ರಹ್ಮ ವಿಷ್ಣು ಮಹೇಶ್ವರ’ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಮಹಾಲಕ್ಷ್ಮೀ ಎರಡು ದಶಕಗಳ ನಂತರ ಮತ್ತೆ ಕನ್ನಡ ಬೆಳ್ಳಿತೆರೆಗೆ ಬರಲಿದ್ದಾರೆ. ‘ದುರ್ಗಾಷ್ಟಮಿ’ ಸಿನಿಮಾದ ನಂತರ ಮಹಾಲಕ್ಷ್ಮೀ ಕನ್ನಡ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆಮೇಲೆ ಅವರು ಇದ್ದಕ್ಕಿದ್ದ ಹಾಗೆ ಕಾಣೆಯಾಗಿದ್ದರು. ಈ ನಡುವೆ ಮಹಾಲಕ್ಷ್ಮೀ ‘ಕ್ರಿಶ್ಚಿಯನ್‌ ನನ್‌’ (ಕ್ರೈಸ್ತ ಸನ್ಯಾಸಿನಿ) ಆಗಿದ್ದಾರಂತೆ ಎಂಬ ಸುದ್ದಿಗಳು ಹರಿಡಿದ್ದವು. ಆದರೆ ಅದೆಲ್ಲವೂ ಸುಳ್ಳು ಎಂದು ಸ್ವತಃ ಮಹಾಲಕ್ಷ್ಮೀ ಅವರೇ ಲವಲವಿಕೆಗೆ ತಿಳಿಸಿದ್ದಾರೆ.

‘ನಾನು ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ. ಕನ್ನಡಿಗರು ತೋರಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ನನ್‌ ಆಗಿದ್ದೆ, ಕಾಣೆಯಾಗಿದ್ದೆ ಎನ್ನುವುದೆಲ್ಲವೂ ಸುಳ್ಳು ವದಂತಿಗಳು. ನನ್ನದೇ ಆದ ಒಂದು ಕುಟುಂಬವಿದೆ. ನಾನು ಕೌಟುಂಬಿಕ ಕಾರಣಗಳಿಂದಾಗಿ ಸಿನಿಮಾಗಳಿಂದ ದೂರ ಇದ್ದೆ ಅಷ್ಟೇ. ಈಗ ನಾನು ನಟನೆ ಮಾಡಲು ರೆಡಿ ಇದ್ದೇನೆ. ಈಗಾಗಲೇ ನನಗೆ ಕನ್ನಡ ಚಿತ್ರರಂಗದಿಂದ 3-4 ಫೋನ್‌ ಕಾಲ್‌ಗಳು ಬಂದಿವೆ. ಎಲ್ಲವೂ ಖಚಿತಗೊಂಡ ಮೇಲೆ ವಿವರಗಳನ್ನು ಹೇಳುತ್ತೇನೆ’ ಎಂದು ಹೇಳುತ್ತಾರೆ ಮಹಾಲಕ್ಷ್ಮೀ.

‘ಉತ್ತಮ ಪಾತ್ರಗಳು ಮತ್ತು ಡಿಗ್ನಿಫೈಡ್‌ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದೇನೆ. ಈಗ ನನಗೆ ಬಂದಿರುವ ಪಾತ್ರಗಳು ಹಾಗೆ ಇವೆ. ಉತ್ತಮ ಸಿನಿಮಾಗಳ ಮೂಲಕ ಕನ್ನಡಿಗರನ್ನು ಭೇಟಿ ಮಾಡುತ್ತೇನೆ. ನಾನು ಸಂಸಾರಿಯಾಗಿದ್ದೆ. ಹಾಗಾಗಿ ಸಿನಿಮಾಗಳಲ್ಲಿನಟಿಸಿಲ್ಲ. ಈಗ ಉತ್ತಮ ಪಾತ್ರಗಳ ಮೂಲಕ ಬೆಳ್ಳಿ ತೆರೆಗೆ ವಾಪಾಸ್ಸಾಗಲು ತೀರ್ಮಾನ ಮಾಡಿದ್ದೇನೆ’ ಎನ್ನತ್ತಾರೆ ಅವರು. ತಮಿಳಿನ ಖ್ಯಾತ ನಟ ಎವಿಎಂ ರಾಜನ್ ಅವರ ಪುತ್ರಿಯಾಗಿರುವ ಮಹಾಲಕ್ಷ್ಮೀ ಮೊದಲು ಬಣ್ಣ ಹಚ್ಚಿದ್ದು ತಮಿಳಿನಲ್ಲಿ. ಆನಂತರ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಈಗ ಅವರನ್ನು ಕನ್ನಡಕ್ಕೆ ಮರಳಿ ಕರೆತರುವ ಪ್ರಯತ್ನಗಳು ಜಾರಿಯಲ್ಲಿವೆ.

Comments are closed.