ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯನಟ ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಹಿತಾ ತಮ್ಮ ಬಹುದಿನದ ಗೆಳೆಯ ನಟ ಕಿರಣ್ ಶ್ರೀನಿವಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ಜೋಡಿ ಈಗ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮದುವೆ ದಿನಾಂಕ ಬಗ್ಗೆ ಇಬ್ಬರ ಕುಟುಂಬದವರು ಬಹಿರಂಗಪಡಿಸಿಲ್ಲ. ಹಿತಾ ಮತ್ತು ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಷಯವನ್ನು ನಟಿ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ಕೆಲವು ತಿಂಗಳ ಹಿಂದೆ ಕಿರಣ್ ಹಾಗೂ ಹಿತಾ ಚಂದ್ರಶೇಖರ್ ಅವರು ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು. ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.
2008ರಲ್ಲಿ ಕಿರಣ್ ‘ಹಾಗೇ ಸುಮ್ಮನೆ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸಿದ್ದು, ‘ಚಿರು’, ‘ಮುಗಿಲ ಮಲ್ಲಿಗೆಯೋ’, ‘ಕಾಂಚನಾ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರಣ್ ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಇತ್ತ ಹಿತಾ ಚಂದ್ರಶೇಖರ್ 2016ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಡಾನ್ಸಿಂಗ್ ಸ್ಟಾರ್’ ಸೀಸನ್ 3ರಲ್ಲಿ ವಿಜೇತೆಯಾಗಿದ್ದರು. ನಂತರ `ಕಾಲ್ ಕೆಜಿ ಪ್ರೀತಿ’ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು.
Comments are closed.