ಮನೋರಂಜನೆ

ರಂಗನಾಯಕಿ: ಪರಭಾಷಾ ಚಿತ್ರಗಳೆದುರೂ ಸ್ಪರ್ಧೆಯೊಡ್ಡುವ ಹೆಮ್ಮೆಯ ಚಿತ್ರ!

Pinterest LinkedIn Tumblr


ಬೆಂಗಳೂರು: ಕನ್ನಡ ಚಿತ್ರಗಳು ಕರ್ನಾಟಕಕ್ಕೆ ಮಾತ್ರವೇ ಸೀಮಿತ ಎಂಬಂಥಾ ವಾತಾವರಣ ಹಲವಾರು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆದರೆ ಕನ್ನಡ ಸಿನಿಮಾಗಳು ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತವೆ, ಪರಭಾಷಾ ಚಿತ್ರಗಳೆದುರೂ ಸ್ಪರ್ಧೆಯೊಡ್ಡಿ ಗೆದ್ದು ಬೀಗುತ್ತವೆಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿಯೇ ಮನನವಾಗಿದೆ. ಕೆಜಿಎಫ್‍ನಂಥಾ ಚಿತ್ರಗಳು ಅದನ್ನು ಮತ್ತಷ್ಟು ಸ್ಪಷ್ವಾಗಿಯೇ ಸಾಬೀತುಗೊಳಿಸಿವೆ. ಇತ್ತೀಚೆಗೆ ಶುರುವಾಗಿರೋ ಕನ್ನಡ ಚಿತ್ರಗಳ ಖದರ್ ಅನ್ನು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ರಂಗನಾಯಕಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿರುಗುವಂತೆ ಮಾಡಿದೆ.

ಪ್ರತೀ ಬಾರಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದವು. ಆದರೆ ತೀವ್ರ ಸ್ಪರ್ಧೆಯೊಡ್ಡಿದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ರಂಗನಾಯಕಿ ವಿಚಾರದಲ್ಲಿ ಬಹು ಕಾಲದ ಕನಸು ಕೈಗೂಡಿದೆ. ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ನ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಮೂಲಕ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರೋ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರದ ಪಾಲಾಗಿದೆ.

ಇದು ಪ್ರತಿಯೊಬ್ಬರೂ ಹೆಮ್ಮೆ ಪಡುವಂಥಾ ಸಂಗತಿ. ಈ ಮೂಲಕವೇ ದಯಾಳ್ ಕನ್ನಡ ಚಿತ್ರರಂಗದ ತಾಕತ್ತೇನೆಂಬುದನ್ನು ಇಡೀ ದೇಶಕ್ಕೇ ತೋರಿಸಿಕೊಟ್ಟಿದ್ದಾರೆ. ಅದೇನು ಸಾಮಾನ್ಯದ ಸಾಧನೆಯಲ್ಲ. ವಿಶ್ವಾದ್ಯಂತ ಬೇರೆ ಬೇರೆ ಭಾಷೆಗಳ ನೂರಾರು ಚಿತ್ರಗಳೊಂದಿಗೆ ಸರ್ಧೆಯೊಡ್ಡಿ ಜಯಿಸಿಕೊಂಡರೆ ಮಾತ್ರವೇ ಈ ಸಿನಿಮೋತ್ಸವಕ್ಕೆ ಪ್ರವೇಶ ಸಿಗುತ್ತದೆ. ಅದನ್ನು ರಂಗನಾಯಕಿ ಚಿತ್ರ ಸಮರ್ಥವಾಗಿಯೇ ಮಾಡಿ ತೋರಿಸಿದೆ. ಇದು ಸದರಿ ಚಿತ್ರದ ಭಿನ್ನವಾದ ಹೂರಣದ ಪ್ರತಿಫಲ. ಇನ್ನೇನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆಗೊಳ್ಳಲಿರೋ ರಂಗನಾಯಕಿ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.

Comments are closed.