ಮನೋರಂಜನೆ

ಚಂದನ್-ನಿವೇದಿತಾ ಪ್ರೀತಿ ಕುರಿತು ಸುದೀಪ್ ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ರ‍್ಯಾಪರ್, ಬಿಗ್‍ಬಾಸ್ ವಿಜೇತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬಿಗ್ ಬಾಸ್ ಶೋ ಹಿನ್ನೆಲೆಯಲ್ಲಿ ಗುರುವಾರ ಖಾಸಗಿ ವಾಹಿನಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ಸುದೀಪ್ ಅವರಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿ ಬಗ್ಗೆ ಪ್ರಶ್ನಿಸಲಾಯಿತು. ಆಗ ಸುದೀಪ್, ಇದು ಬಿಗ್ ಬಾಸ್‍ನಿಂದ ನಡೆದಿರುವುದು ಎಂದು ನಾನು ಹೇಳಲ್ಲ, ಬಿಗ್ ಬಾಸ್ ಮುಗಿದ ಮೇಲೆ ನಡೆದಿರುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಇದು ಅವರಿಬ್ಬರ ಜೀವನ, ಅವರು ಮದುವೆ ಆಗಬೇಕು ಎಂದು ಇದ್ದಾರೆ. ಇದು ಬಿಗ್‍ಬಾಸ್‍ನಿಂದ ನಡೆದಿರುವುದು ಎಂದು ನಾನು ಹೇಳಲ್ಲ, ಇದು ಬಿಗ್‍ಬಾಸ್ ಮುಗಿದ ಮೇಲೆ ನಡೆದಿರುವುದು. ಅವರಿಬ್ಬರ ವಿಷಯ ಕೇಳಿ ಖುಷಿಯಾಗಿದ್ದೇನೆ. ಅದಕ್ಕೂ, ನನಗೂ ಸಂಬಂಧ ಇಲ್ಲ. ಇಬ್ಬರಿಗೂ ಒಳ್ಳೆಯದಾಗಲಿ ಎಂದು ಸುದೀಪ್ ಹೇಳಿದ್ದಾರೆ.

ಕಳೆದ ವಾರ ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್, ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾಳಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು.

ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಯಿತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದ್ದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಎಂದಿದ್ದಾರೆ. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಎಂದು ಒಪ್ಪಿಕೊಳ್ಳುತ್ತಿದ್ದೆ ಎಂದು ನಿವೇದಿತಾ ಸಮರ್ಥಿಸಿಕೊಂಡಿದ್ದಾರೆ.

Comments are closed.