ಮನೋರಂಜನೆ

ನಟನೋರ್ವನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಸಿನೆಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸುತ್ತಿದ್ದ ವಂಚಕನ ಬಂಧನ

Pinterest LinkedIn Tumblr

ಬೆಂಗಳೂರು: ಚಲನಚಿತ್ರ ನಟನೋರ್ವನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಯುವತಿಯರಿಗೆ ಚಿತ್ರಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸುಂಕದ ಕಟ್ಟೆಯ 22 ವರ್ಷದ ವೆಂಕಟೇಶ್ ಬಾವಸಾರ್ ಬಂಧಿತ ಆರೋಪಿ. ಈತ ಚಲನಚಿತ್ರ ನಟನೋರ್ವನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಸುಂದರ ಯುವತಿಯರನ್ನು ಪರಿಚಯ ಮಾಡಿಕೊಂಡು ನಂತರ ಸಲುಗೆಯಿಂದ ಚಾಟಿಂಗ್ ಮಾಡುತ್ತಿದ್ದ. ಯುವತಿಯರು ದೂರವಾಣಿ ಕರೆ ಮಾಡಿ ಮಾತನಾಡುವಂತೆ ಒತ್ತಾಯಿಸಿದಾಗ, ತನಗೆ ಡಿಸೆಂಬರ್ ವರೆಗೂ ಸಮಯವಿಲ್ಲ. ತನ್ನ ಅಸಿಸ್ಟೆಂಟ್ ವೆಂಕಿರಾವ್ ಅವರನ್ನು ಸಂಪರ್ಕಿಸಿ ಎಂದು ವಾಟ್ಸಾಪ್ ಸಂಖ್ಯೆ ನೀಡಿ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ.

ಒಮ್ಮೆ ಪರಿಚಯವಾಗಿದ್ದ ಮಹಿಳೆಯೊಬ್ಬರ ಮಗಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 25 ಸಾವಿರ ರೂ. ಪಡೆದು ವಂಚಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ನಟರೊಬ್ಬರು ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ವಂಚಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.